ADVERTISEMENT

ಚುನಾವಣೆ ನಂತರ ಮನೆ ಸೇರಲಿರುವ ನಾಯಕರು: ಬಿ.ಎಲ್.ಸಂತೋಷ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 14:40 IST
Last Updated 20 ಏಪ್ರಿಲ್ 2019, 14:40 IST
ರಾಯಚೂರಿನಲ್ಲಿ ಶನಿವಾರ ಆಯೋಜಿಸಿದ್ದ ಮೋದಿ ಮತ್ತೊಮ್ಮೆ, ನವ ಭಾರತ ನಿರ್ಮಾಣ ಕುರಿತು ಪ್ರಬುದ್ಧರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಮಾತನಾಡಿದರು
ರಾಯಚೂರಿನಲ್ಲಿ ಶನಿವಾರ ಆಯೋಜಿಸಿದ್ದ ಮೋದಿ ಮತ್ತೊಮ್ಮೆ, ನವ ಭಾರತ ನಿರ್ಮಾಣ ಕುರಿತು ಪ್ರಬುದ್ಧರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಮಾತನಾಡಿದರು   

ರಾಯಚೂರು: ಲೋಕಸಭೆ ಚುನಾವಣೆಯ ನಂತರ ದೇವೇಗೌಡ, ಸಿದ್ದರಾಮಯ್ಯ ಹಾಗೂ ಬಿ.ವಿ.ನಾಯಕ ಮನಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಭವಿಷ್ಯ ನುಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಶನಿವಾರ ಆಯೋಜಿಸಿದ್ದ ಮೋದಿ ಮತ್ತೊಮ್ಮೆ, ನವ ಭಾರತ ನಿರ್ಮಾಣ ಕುರಿತು ಪ್ರಬುದ್ಧರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನರೇಂದ್ರ ಮೋದಿ ದೇಶಕ್ಕಾಗಿ ತ್ಯಾಗ ಮಾಡಿ ದುಡಿಯುತ್ತಿದ್ದಾರೆ. ಆದರೆ, ದೇವೇಗೌಡ ಮೊಮ್ಮಗನಿಗೆ ಸೀಟು ತ್ಯಾಗ ಮಾಡಿದ್ದಾರೆ. ಕುಟುಂಬ ರಾಜಕಾರಣ ಮಾಡುವವರು ಈ ಚುನಾವಣೆಯಲ್ಲಿ ಮನೆಗೆ ಹೋಗಲಿದ್ದು, ಅವರ ಮನೆಯವರು ಮೋದಿಗೆ ಮತ ಹಾಕಿದರೂ ಅಚ್ಚರಿ ಪಡಬೇಕಿಲ್ಲ ಎಂದರು.

ADVERTISEMENT

12 ನಿಮಿಷ ಭಾಷಣ ಮಾಡಿದರೆ ರಾಹುಲ್ ಗಾಂಧಿಗೆ ವಿಶ್ರಾಂತಿ ಬೇಕು. ಇಂತಹವರಿಂದ ದೇಶ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು ರಫೆಲ್ ಬಗ್ಗೆ ಮಾತನಾಡುವ ರಾಹುಲ್ ದಾಖಲೆ ಹಿಡಿದುಕೊಂಡು ಜನರಿಗೆ ಮನವರಿಕೆ ಮಾಡುತ್ತಿಲ್ಲ ಎಂದು ತಿಳಿಸಿದರು.

ಉಜ್ವಲ ಯೋಜನೆಯಡಿ ಗ್ಯಾಸ್‌ ಸಿಲಿಂಡೆರ್ ಸಂಪರ್ಕ ನೀಡಲಾಗಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಮಾಡಲಾಗಿದೆ. ಮೋದಿ ಒಂದೂ ಭ್ರಷ್ಟಾಚಾರ ಮಾಡಿಲ್ಲ. ದೇಶವನ್ನು ಜಗತ್ತೇ ನೋಡುವಂತೆ ಮಾಡಿದ್ದಾರೆ. ಆದರೆ, 65 ವರ್ಷ ಆಡಳಿತ ಮಾಡಿದವರು ಏನು ಮಾಡಿದರು ಎಂದು ಕೇಳಿದರು.

ನಂತರ ನಡೆದ ಸಂವಾದದಲ್ಲಿ ಬಿಜೆಪಿ ದಲಿತ ವಿರೋಧಿ ಎಂಬ ಪ್ರಶ್ನೆಗೆ ಅಂಬೇಡ್ಕರ್ ಆಶೋತ್ತರಗಳಿಗೆ, ಅವರು ಹುಟ್ಟಿದ, ಓದಿದ ಸ್ಥಳಗಳಿಗೆ ಅಭ್ಯುದಯ ಮಾಡಿದ್ದು, ಮೋದಿಯವರಾಗಿದ್ದಾರೆ. ಹೊರತು ದಲಿತ ನಾಯಕರೆಂದು ಹೇಳಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆಯಲ್ಲ ಎಂದರು.

ಮೋದಿ ಶ್ರೀಮಂತರ ಪರ ಎಂಬ ಪ್ರಶ್ನೆಗೆ, ಮೋದಿ ಬಡವರ ಪರವಾಗಿದ್ದು, ಬಡವರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಸಿ.ಟಿ.ರವಿ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿದರು.ಶಾಸಕರಾದ ಡಾ.ಶಿವರಾಜ ಪಾಟೀಲ, ರಾಜುಗೌಡ, ಸಂಸದ ಪಿ.ಸಿ.ಮೋಹನ್, ಜಿಲ್ಲಾ ಅಧ್ಯಕ್ಷ ಶರಣಪ್ಪಗೌಡ, ಮುಖಂಡರಾದ ನಾರಾಯಣಸ್ವಾಮಿ, ಎನ್.ಶಂಕ್ರಪ್ಪ, ಅಶೋಕ ಗಸ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.