
ರಾಯಚೂರು: ಭಾರತೀಯ ರೈಲ್ವೆ ಇಲಾಖೆ ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ಟಿಕೆಟ್ ದರ ಏರಿಕೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಸಾಮಾನ್ಯ ದರ್ಜೆ ಪ್ರಯಾಣದ ದೂರ 215 ಕಿ.ಮೀ ಮೀರಿದರೆ ಪ್ರತಿ ಕಿ.ಮೀಗೆ 1 ಪೈಸೆ ಮತ್ತು ನಾನ್ ಎಸಿ ಮೇಲ್ ಎಕ್ಸ್‌ಪ್ರೆಸ್ ಮತ್ತು ಎಲ್ಲ ಎಸಿ ದರ್ಜೆಗಳಿಗೆ ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಿಸಲಾಗಿದೆ. ಇದು ವರ್ಷದಲ್ಲಿ ಎರಡನೇ ಬಾರಿ ದರವನ್ನು ಏರಿಕೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಇಲಾಖೆಯ ಈ ಕ್ರಮದಿಂದ ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿದೆ. ದುಬಾರಿ ವೆಚ್ಚದ ಆಹಾರ ಪದಾರ್ಥಗಳಿಂದ ಈಗಾಗಲೇ ಪೋಷಣೆ, ಮಕ್ಕಳ ಶಿಕ್ಷಣ ಹಾಗೂ ಇತರೆ ವೆಚ್ಚಗಳಿಂದ ಜನರು ರೋಸಿ ಹೋಗಿದ್ದಾರೆ. ರೈಲ್ವೆ ಪ್ರಯಾಣದ ದರ ಏರಿಕೆ ಮಾಡಿರುವುದು ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.
ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ, ನಗರ ಘಟಕ ಅಧ್ಯಕ್ಷ ಮಹ್ಮದ್ ಶಹಬಾದ್, ರಾಜ್ಯ ಕಾರ್ಯದರ್ಶಿ ಫೈಜಲ್ ಖಾನ್, ಮಾಜಿ ರಾಜ್ಯ ಕಾರ್ಯದರ್ಶಿ ಶೇಬಾದ್, ಪ್ರಮುಖರಾದ ಹುಸೇನ್ ಪಾಷಾ, ಎಚ್.ಡಿ ಜಾವೀದ್, ರಘು ಮಡಿವಾಳ, ಮಧುಕುಮಾರ, ಪ್ರವೀಣ, ರಾಬರ್ಟ್, ಸೀನು, ಅಜೀಂ, ಪ್ರತಾಪರೆಡ್ಡಿ, ಕಿಶೋರ, ವೀರನಗೌಡ, ಅಬ್ದುಲ್ ಗೌಸ್, ಆಸೀಪ್, ಶೋಹೇಬ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.