ADVERTISEMENT

ಮುಂದುವರಿದ ಸಂವಿಧಾನ–ಮನುಸ್ಮೃತಿ ಸಂಘರ್ಷ: ಚಿಂತಕ ರಾಮ್ ಪುನಿಯಾನಿ

ಮೇ ಸಾಹಿತ್ಯ ಮೇಳದಲ್ಲಿ ಚಿಂತಕ ರಾಮ್ ಪುನಿಯಾನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಮೇ 2025, 0:09 IST
Last Updated 18 ಮೇ 2025, 0:09 IST
ಸಿಂಧನೂರಿನಲ್ಲಿ ಆಯೋಜಿಸಿದ್ದ 11ನೇ ಮೇ ಸಾಹಿತ್ಯ ಮೇಳವನ್ನು ಹೋರಾಟಗಾರಾದ ಸಂಗಮ್ಮ, ಭೀಮಣ್ಣ ನಗನೂರು, ನರಸಿಂಹಮ್ಮ, ಚಿನ್ನಮ್ಮ ಮುದ್ದನಗುಡ್ಡಿ ಹಾಗೂ ತಿಮ್ಮನಗೌಡ ಚಿಲ್ಕರಾಗಿ ಪಂಜನ್ನು ಎತ್ತಿ ಹಿಡಿದು ಉದ್ಘಾಟಿಸಿದರು
ಸಿಂಧನೂರಿನಲ್ಲಿ ಆಯೋಜಿಸಿದ್ದ 11ನೇ ಮೇ ಸಾಹಿತ್ಯ ಮೇಳವನ್ನು ಹೋರಾಟಗಾರಾದ ಸಂಗಮ್ಮ, ಭೀಮಣ್ಣ ನಗನೂರು, ನರಸಿಂಹಮ್ಮ, ಚಿನ್ನಮ್ಮ ಮುದ್ದನಗುಡ್ಡಿ ಹಾಗೂ ತಿಮ್ಮನಗೌಡ ಚಿಲ್ಕರಾಗಿ ಪಂಜನ್ನು ಎತ್ತಿ ಹಿಡಿದು ಉದ್ಘಾಟಿಸಿದರು   
ಬಡವರು–ಶ್ರೀಮಂತರ ನಡುವೆ ಅಂತರ ಹೆಚ್ಚು | ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟ | ರಾಜ್ಯದ ವಿವಿಧೆಡೆಯ ಪ್ರತಿನಿಧಿಗಳು ಸಾಹಿತ್ಯ ಮೇಳದಲ್ಲಿ ಭಾಗಿ

ಸಿಂಧನೂರು (ರಾಯಚೂರು ಜಿಲ್ಲೆ): ‘ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂವಿಧಾನದ ಆಶಯದಂತೆ ಅಸಮಾನತೆ ಬೇರು ಸಮೇತ ತೊಲಗಬೇಕಾಗಿತ್ತು. ಆದರೆ, ಸಂವಿಧಾನ ಅಸ್ತಿತ್ವಕ್ಕೆ ಬರುವ ಸಮಯದಲ್ಲಿ ವಿರೋಧಿಸಿದ ಮನುಸ್ಮೃತಿಯ ಆರಾಧಕರು ಈಗಲೂ ಅಸಮಾನತೆಯನ್ನು ಪೋಷಿಸುತ್ತಿದ್ದಾರೆ. ಹೀಗಾಗಿ ಸಂವಿಧಾನ ಮತ್ತು ಮನುಸ್ಮೃತಿಯ ನಡುವೆ ಸಂಘರ್ಷ ಮುಂದುವರಿದಿದೆ’ ಎಂದು ಮುಂಬೈನ ಚಿಂತಕ ರಾಮ್ ಪುನಿಯಾನಿ ಅಭಿಪ್ರಾಯಪಟ್ಟರು.

ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶ ಕವಲಕ್ಕಿ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ಸಿಂಧನೂರಿನ ಮೇ ಸಾಹಿತ್ಯ ಮೇಳ ಬಳಗದ ಆಶ್ರಯದಲ್ಲಿ ಮೆದಿಕಿನಾಳ ಭೂ ಹೋರಾಟ ನೆನಪಿನ ವೇದಿಕೆಯಲ್ಲಿ ‘ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು–ಇಂದು’ ಘೋಷವಾಕ್ಯದೊಂದಿಗೆ ಶನಿವಾರ ಆರಂಭಗೊಂಡ ಎರಡು ದಿನಗಳ 11ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.

‘ಆಹಾರ ಧಾನ್ಯ ಬೆಳೆಯುವ ರೈತರು ಅನ್ನಕ್ಕಾಗಿ, ಮನೆ ಕಟ್ಟುವ ಕಾರ್ಮಿಕರು ವಾಸಕ್ಕಾಗಿ, ಬಟ್ಟೆ ನೇಯುವ ನೇಕಾರರು ಬಟ್ಟೆಗಾಗಿ ಪರಿತಪಿಸಬೇಕಾಗಿದೆ. 10 ಜನ ಇರುವ ಕುಟುಂಬ ಚಿಕ್ಕ ಗುಡಿಸಲಲ್ಲಿ ವಾಸಿಸುತ್ತಿದ್ದರೆ, ಕೇವಲ ಐವರಿರುವ ಶ್ರೀಮಂತ ಕುಟುಂಬ 26 ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿರುವುದು ಅಸಮಾನ ಭಾರತಕ್ಕೆ ಕನ್ನಡಿಯಾಗಿದೆ’ ಎಂದು ವಿಷಾದಿಸಿದರು.

ADVERTISEMENT

ಚಿಂತಕ ಶಂಸುಲ್ ಇಸ್ಲಾಮ್ ಮಾತನಾಡಿ, ‘1,100 ವರ್ಷಗಳ ಕಾಲ ಆಳಿದ ಮುಸ್ಲಿಂ ರಾಜರಿಗೆ ಮುಸ್ಲಿಂ ರಾಷ್ಟ್ರ ಹಾಗೂ ಹಿಂದೂ ರಾಜರ ಆಡಳಿತದಲ್ಲಿಯೂ ಹಿಂದೂ ರಾಷ್ಟ್ರ ನಿರ್ಮಿಸುವ ಉದ್ದೇಶ ಇರಲಿಲ್ಲ. ಆದರೆ, ಇತ್ತೀಚೆಗೆ ಫ್ಯಾಸಿಸ್ಟ್ ಶಕ್ತಿಗಳು ಮುಸ್ಲಿಮರನ್ನು ಭಯೋತ್ಪಾದಕರಂತೆ ಚಿತ್ರಿಸಿ ಹಿಂದೂ ರಾಷ್ಟ್ರವನ್ನಾಗಿಸುವ ಹುನ್ನಾರ ನಡೆಸಿವೆ. ಇದು ಅಪಾಯಕಾರಿಯಾಗಿದೆ. ದೇಶದ ಎಲ್ಲ ವರ್ಗದ ಜನರು ಜಗೃತರಾಗಿ ಸಾಮರಸ್ಯದ ಭಾರತ ಕಟ್ಟಬೇಕಿದೆ’ ಎಂದು ಪ್ರತಿಪಾದಿಸಿದರು.

ಔರಂಗಾಬಾದ್‍ನ ಮಾಲತಿ ವರಾಳೆ ಮಾತನಾಡಿ, ‘ಅಪಮಾನವುಂಡು ಕೆಳವರ್ಗದವರಿಗೆ ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಸ್ಫೂರ್ತಿದಾಯಕರಾಗಿದ್ದಾರೆ’ ಎಂದರು.

ಸಾಹಿತಿ ಬಿ.ಎಂ.ಪುಟ್ಟಯ್ಯ ಮಾತನಾಡಿದರು.

ಇದಕ್ಕೂ ಮೊದಲು ಮೆದಿಕಿನಾಳ ಭೂ ಹೋರಾಟದ ಸಂಗಮ್ಮ, ದಲಿತ ಚಳವಳಿಯ ಭೀಮಣ್ಣ ನಗನೂರು, ಕಾರ್ಮಿಕ ಚಳವಳಿಯ ನರಸಿಂಹಪ್ಪ ರಾಮತ್ನಾಳ, ಮದ್ಯವಿರೋಧಿ ಹೋರಾಟದ ಚಿನ್ನಮ್ಮ ಮುದ್ದನಗುಡ್ಡಿ ಹಾಗೂ ರೈತ ಚಳವಳಿಯ ತಿಮ್ಮನಗೌಡ ಚಿಲ್ಕರಾಗಿ ಒಗ್ಗೂಡಿ ಭಾರತದ ನಕ್ಷೆಯಿದ್ದ ಫಲಕಕ್ಕೆ ಹಾಕಿದ್ದ ಸರಪಳಿಗಳ ಬೀಗ ತೆಗೆದು, ಬೆಳಕಿನ ಪಂಜನ್ನು ಎತ್ತಿ ಹಿಡಿದು ಸಾಹಿತ್ಯ ಮೇಳವನ್ನು ಉದ್ಘಾಟಿಸಿದರು.

ಬಸವರಾಜ ಬಾದರ್ಲಿ ಸಂವಿಧಾನದ ಪೀಠಿಕೆ ಓದಿದರು. ಸಂಗಮೇಶ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೋತ್ನಾಳ ಚರ್ಚ್ ಫಾದರ್ ವಿನೋದ ಪೌಲ್, ಅನಿಲ ಹೊಸಮನಿ ಉಪಸ್ಥಿತರಿದ್ದರು. ಎಚ್.ಎಸ್.ಅನುಮಪಮಾ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮೇಳಕ್ಕೆ ಪ್ರತಿನಿಧಿಗಳು ಬಂದಿದ್ದಾರೆ.

ಸಿಂಧನೂರಿನಲ್ಲಿ ಶನಿವಾರ ನಡೆದ 11ನೇ ಮೇ ಸಾಹಿತ್ಯ ಮೇಳದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.