ADVERTISEMENT

ಸಿಂಧನೂರು: ಮೊಟ್ಟೆ, ಬಾಳೆಹಣ್ಣು ವಿತರಣೆ ಮುಂದುವರಿಸಿ

ಮಿನಿವಿಧಾನಸೌಧ ಮುಂದೆ ಸಿಐಟಿಯು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 14:20 IST
Last Updated 23 ಡಿಸೆಂಬರ್ 2021, 14:20 IST
ಸಿಂಧನೂರಿನ ಮಿನಿವಿಧಾನಸೌಧ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲ್ಲೂಕು ಘಟಕದ ಪ್ರಮುಖರು ಗುರುವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಮರಿಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಸಿಂಧನೂರಿನ ಮಿನಿವಿಧಾನಸೌಧ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲ್ಲೂಕು ಘಟಕದ ಪ್ರಮುಖರು ಗುರುವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಮರಿಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಮೊಟ್ಟೆ ಹಾಗೂ ಬಾಳೆಹಣ್ಣು ನೀಡುವ ಕ್ರಮವನ್ನು ಮುಂದುವರೆಸಬೇಕು. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲ್ಲೂಕು ಘಟಕ ಗುರುವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿತು.

ಕಲ್ಯಾಣ ಕರ್ನಾಟಕ ಭಾಗದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆ ನಿಟ್ಟಿನಲ್ಲಿ ಮೊಟ್ಟೆ ಹಾಗೂ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ವಿತರಿಸುವ ಕಾರ್ಯಕ್ರಮವನ್ನು ಡಿಸೆಂಬರ್‌ನಿಂದ ಆರಂಭಿಸಿರುವುದು ಸ್ವಾಗತಾರ್ಹ. ಆದರೆ ಈ ಕಾರ್ಯಕ್ರಮವನ್ನು ವಾರದಲ್ಲಿ ಮೂರು ದಿನಗಳಿಗೆ ಸೀಮಿತಗೊಳಿಸಿದ್ದು, ಅದನ್ನು ವಾರವಿಡೀ ನೀಡಬೇಕು ಎಂದು ಆಗ್ರಹಿಸಿದರು.

ಹಾಗೂ ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ವಿಸ್ತರಿಸಬೇಕು. ಆದರೆ ಕೆಲವು ಮಠಾಧೀಶರು, ಮತಾಂಧ ಶಕ್ತಿಗಳು ಹಾಗೂ ಕೋಮುವಾದಿ ಸಂಘಟನೆಗಳು ಸರ್ಕಾರದ ಕ್ರಮ ವಿರೋಧಿಸಿ, ಮಕ್ಕಳ ಆಹಾರದ ಮೇಲೆ ದಾಳಿ ನಡೆಸುತ್ತಿರುವುದು ಆಹಾರದ ಹಕ್ಕು ಕಸಿಯುವ ಹುನ್ನಾರ ಹಾಗೂ ಪ್ರಜಾಪ್ರಭುತ್ವದ ವಿರೋಧಿ ಕ್ರಮವಾಗಿದೆ ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ ದೂರಿದರು.

ADVERTISEMENT

ಸರ್ಕಾರ ಇಂತಹ ಮತಾಂಧ ಹಾಗೂ ಕೋಮುವಾದಿ ಶಕ್ತಿಗಳ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಗೆ ಒತ್ತಡಗಳಿಗೆ ಮಣಿಯಬಾರದು. ಮಕ್ಕಳ ಆಹಾರ ಹಕ್ಕುಗಳನ್ನು ರಕ್ಷಿಸಲು ಈಗ ತೆಗೆದುಕೊಂಡಿರುವ ಕಲ್ಯಾಣ ಕರ್ನಾಟಕ ಭಾಗದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಶಿರಸ್ತೇದಾರ್ ಮರಿಸ್ವಾಮಿ ಮನವಿ ಪತ್ರ ಸ್ವೀಕರಿಸಿದರು.

ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಯಂಕಪ್ಪ ಕೆಂಗಲ್, ಸದಸ್ಯರಾದ ಮಾಬುಸಾಬ, ಎಸ್.ದೇವೇಂದ್ರಗೌಡ, ಮುರ್ತುಜಾ ಡ್ರೈವರ್, ಸತ್ತಾರ್‍ಖಾನ್, ಶರಣಬಸವ, ಅಯ್ಯಪ್ಪ, ಆರ್.ಗೋಪಾಲಕೃಷ್ಣ, ಬಸವರಾಜ, ಹನುಮೇಶ, ಶರಣಮ್ಮ ಪಾಟೀಲ್, ಚಂದಪ್ಪ, ರಾಜಾಸಾಬ, ಅಮರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.