ರಾಯಚೂರು: ‘ಇದು ಸ್ಪರ್ಧಾತ್ಮಕ ಯುಗ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಸ್ಪರ್ಧಾರ್ಥಿಗಳು ನಿರಂತರ ಅಧ್ಯಯನ ಮಾಡಬೇಕು. ಅಂದಾಗ ಜೀವನದಲ್ಲಿ ಯಶಸ್ಸು ದೊರೆಯುತ್ತದೆ’ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಇಲ್ಲಿಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎನ್.ಎಸ್.ಬೋಸರಾಜು ಫೌಂಡೇಷನ್, ಜ್ಞಾನ ದರ್ಶಿನಿ ಶಿಕ್ಷಣ ಸಂಸ್ಥೆ, ಕನಸು ಕೆಎಎಸ್ ಅಕಾಡೆಮಿ ಹಾಗೂ ಬ್ರೈಟ್ ವೇ ಕಂಪ್ಯೂಟರ್ಸ್ ಆಶ್ರಯದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ 79ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಉತ್ತಮ ಗುರಿ ಇಟ್ಟುಕೊಳ್ಳಬೇಕು. ಆ ಗುರಿ ತಲುಪಲು ಶ್ರದ್ದೆ, ಸತತ ಪರಿಶ್ರಮ ಹಾಗೂ ಆತ್ಮಸ್ಥೆರ್ಯದಿಂದ ಪ್ರಯತ್ನಿಸಬೇಕು. ಆಗ ಮಾತ್ರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು.
‘ಶೈಕ್ಷಣಿಕ ಕೋರ್ಸ್‌ಗಳ ಅಭ್ಯಾಸದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಒತ್ತು ನೀಡಬೇಕು. ಹೆಚ್ಚಿನ ಜ್ಞಾನ ಸಂಪಾದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಓದುವುದನ್ನು ಬಿಟ್ಟು ಬೇರೆ ಯಾವ ಅಭ್ಯಾಸವನ್ನೂ ಮೈಗೂಡಿಸಿಕೊಳ್ಳಬಾರದು. ಓದುವುದು ಮಾತ್ರ ಕೆಲಸ ಎನ್ನುವ ಮನೋಭಾವ ರೂಢಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಅವಧೂತ ವಿನಯ ಗುರೂಜಿ ಮಾತನಾಡಿ, ‘ಎನ್.ಎಸ್.ಬೋಸರಾಜು ಸರಳ ವ್ಯಕ್ತಿತ್ವದ ದೂರದೃಷ್ಟಿವುಳ್ಳ ನಾಯಕ. ತಮ್ಮ 50 ವರ್ಷಗಳ ಕಾಲ ರಾಜಕೀಯದಲ್ಲಿ ಅನೇಕರಿಗೆ ಮಾದರಿ ಆಗಿದ್ದಾರೆ. ರಾಯಚೂರಿನ ಸಮಗ್ರ ಅಭಿವೃದ್ಧಿಗೆ ಬೋಸರಾಜು ಅವರಂಥಹ ನಾಯಕರು ಇರಬೇಕು. ಹಿಂದುಳಿದ ಜಿಲ್ಲೆ ಅಭಿವೃದ್ಧಿ ಹೊಂದಬೇಕಾದರೆ, ಜನರಿಗೆ ಉತ್ತಮ ಶಿಕ್ಷಣ, ಆಸ್ಪತ್ರೆ ಸೌಲಭ್ಯ, ಉದ್ಯೋಗ ಸಿಗಬೇಕು. ಈ ನಿಟ್ಟಿನಲ್ಲಿ ಎನ್.ಎಸ್.ಬೋಸರಾಜು ಫೌಂಡೇಷನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.
ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಸ್ಮಿತಾ ಮಾತನಾಡಿದರು.
ಶಿಕಾರಿಪುರ ಮಂಜುನಾಥ, ಶರಣಯ್ಯ, ಶರಣು ಬಾಗೂರು ಉಪನ್ಯಾಸ ನೀಡಿದರು. ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಶ್ರೀನಿವಾಸರೆಡ್ಡಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎನ್.ಎಸ್.ಬೋಸರಾಜು ಫೌಂಡೇಷನ್ ಸಂಚಾಲಕ ವೆಂಕಟ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.