ಲಿಂಗಸುಗೂರಿನ ಆರ್‌ಡಿಪಿಆರ್ ಕಚೇರಿ ಪಕ್ಕದಲ್ಲಿ ನಡೆಯುತ್ತಿರುವ
ಬಿಟಿ ರಸ್ತೆ ಕಾಮಗಾರಿ ಸ್ಥಿತಿ
ಲಿಂಗಸುಗೂರು: ಪುರಸಭೆ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಗುತ್ತಿಗೆದಾರರು ಅರೆಬರೆಯಾಗಿ ಮಾಡುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
15ನೇ ಹಣಕಾಸು ಆಯೋಗದ 2023-24ನೇ ಸಾಲಿನ ₹1.87 ಕೋಟಿ, 2024-25ನೇ ಸಾಲಿನ ₹1.37 ಕೋಟಿ ಅನುದಾನದಡಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಇನ್ನೂ ಕೆಲವು ಮುಕ್ತಾಯದ ಹಂತದಲ್ಲಿವೆ.
ಎರಡು ವರ್ಷಗಳ ಅನುದಾನದಲ್ಲಿ ರಸ್ತೆ ಕಾಮಗಾರಿಗಳಿಗಾಗಿ ಒಟ್ಟು ₹51.02 ಲಕ್ಷ ಬಳಕೆ ಮಾಡಲಾಗಿದೆ. ವಾರ್ಡ ನಂ 5, 7, 9, 16ರಲ್ಲಿ ಬಿಟಿ ರಸ್ತೆ ನಿರ್ಮಾಣದ ಮತ್ತು 6, 13, 20, 23 ವಾರ್ಡಗಳಲ್ಲಿ ಪಾದಚಾರಿ ಮಾರ್ಗ (ಪೇವರ್ ಅಳವಡಿಸುವ) ಕಾಮಗಾರಿಗಳನ್ನು ಮಾರ್ಗಸೂಚಿಗಳಂತೆ ಹಾಗೂ ಟೆಂಡರ್ ನಿಯಮದಂತೆ ಮಾಡದೇ ಗುತ್ತಿಗೆದಾರರು ತಮ್ಮ ಮನಬಂದಂತೆ ಮಾಡಿದ್ದಾರೆ ಮತ್ತು ಅದನ್ನೇ ಮುಂದುವರಿಸಿದ್ದಾರೆ.
ಬಿಟಿ ರಸ್ತೆಗಾಗಿ ಅರ್ಥ್ ವರ್ಕ ಮಾಡದೇ ನೇರವಾಗಿ ಕಾಂಕ್ರಿಟ್ ಹಾಕಿ ರೋಲಿಂಗ್ ಮಾಡದೇ ಕಾಮಗಾರಿ ಮಾಡುತ್ತಿದ್ದಾರೆ, ಜಿ.ಪಂ ಕಚೇರಿ ಪಕ್ಕದಲ್ಲಿ ಸಿಸಿ ರಸ್ತೆ ಮೇಲೆ ಬಿಟಿ ರಸ್ತೆ ಮಾಡುತ್ತಿದ್ದಾರೆ.
17ನೇ ವಾರ್ಡ್‌ನಲ್ಲಿ ಬೈಪಾಸ್ ರಸ್ತೆಗೆ ಹೊಂದಿಕೊಂಡು ಚರಂಡಿ ನಿರ್ಮಾಣ ಮಾಡಲಾಗುತ್ತಿದೆ, ಅರ್ಧ ಕಾಮಗಾರಿ ಚರಂಡಿ ನಿರ್ಮಾಣ ಮಾಡಿದರೆ ಇನ್ನರ್ಧ ಸಿಮೆಂಟ್ ಪೈಪ್ ಹಾಕುವ ಮೂಲಕ ಟೆಂಡರ್ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ.
‘ಬಹಳ ದಿನಗಳ ನಂತರ ನಮ್ಮ ವಾರ್ಡ್‌ಗೆ ಕಾಮಗಾರಿ ಮಂಜೂರಾಗಿದೆ. ಗುತ್ತಿಗೆದಾರರು ಅರೆಬರೆಯಾಗಿ ಕಾಮಗಾರಿ ಮಾಡುತ್ತಿದ್ದರಿಂದ ರಸ್ತೆ ಎಷ್ಟು ದಿನ ಬಾಳಿಕೆ ಬರತ್ತೋ ಗೊತ್ತಿಲ್ಲ. ಮಳೆ ಬಂದರೆ ಕಿತ್ತಿಕೊಂಡು ಹೋಗಬಹುದು, ಈ ಬಗ್ಗೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಹೆಸರಿಗೆ ಮಾತ್ರ ಮಳೆ ಕೊಯ್ಲು: ಪಟ್ಟಣದ ಕರಡಕಲ್ ಕೆರೆ ಸಮೀಪದಲ್ಲಿರುವ ಬಿಸಿಎಂ ಮಹಿಳಾ ಹಾಸ್ಟೆಲ್ ಆವರಣದಲ್ಲಿ ಮಳೆ ನೀರಿನ ಕೊಯ್ಲ ನಿರ್ಮಾಣಕ್ಕಾಗಿ ₹10 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಬಿಸಿಎಂ ಹಾಸ್ಟೆಲ್ ಕಟ್ಟಡದ ಹಳೆಯ ಪೈಪ್‌ಗಳಿಗೆ ಹೊಸ ಪೈಪ್ ಜೋಡಣೆ ಮಾಡಲಾಗಿದೆ. ಮಳೆ ನೀರು ಸಂಗ್ರಹಕ್ಕೆ ಎಂದು ಹಾಸ್ಟೆಲ್ ಆವರಣದಲ್ಲಿ ಕಾಂಕ್ರಿಟ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆ ಗಮನಿಸಿದರೆ ಇದು ಕೇವಲ ಕಾಟಚಾರಕ್ಕಾಗಿ ಮಾಡಲಾಗಿದೆ ವಿನಾಃ ಮಳೆ ಕೊಯ್ಲಿನ ಮೂಲ ಉದ್ದೇಶವೇ ಇಲ್ಲಿ ಕಣ್ಮರೆಯಾಗಿದೆ.
‘ಮಳೆ ಕೊಯ್ಲು ಲಾಭ ಗುತ್ತಿಗೆದಾರರಿಗೆ ಆಗಿದೆ’ ಎಂದು ಹೆಸರು ಹೇಳಲು ಇಚ್ಚಿಸದ ಪುರಸಭೆ ಸದಸ್ಯ ಆರೋಪಿಸಿದ್ದಾರೆ.
ಭೇಟಿಯೂ ಇಲ್ಲ: ಪಟ್ಟಣದಲ್ಲಿ ಕಾಮಗಾರಿಗಳು ನಡೆಯುತ್ತಿದ್ದರೂ ಗುಣಮಟ್ಟದ ಬಗ್ಗೆ ಕಾಳಜಿವಹಿಸಬೇಕಾದ ಪುರಸಭೆ ಮುಖ್ಯಾಧಿಕಾರಿ, ಕಿರಿಯ ಅಭಿಯಂತರ, ಪುರಸಭೆ ಅಧ್ಯಕ್ಷ ಕಾಮಗಾರಿ ಸ್ಥಳಕ್ಕೆ ಒಮ್ಮೆ ಬೇಟಿ ನೀಡದಿರುವುದೇ ನಿರ್ಲಕ್ಷ್ಯ ವಹಿಸಿದ್ದರಿಂದ ಗುತ್ತಿಗೆದಾರರಿಗೆ ಮಾಡಿದ್ದೇ ಕಾಮಗಾರಿ ಅನ್ನುವಂತಾಗಿದೆ.
ಗುಣಮಟ್ಟ ವರದಿ ಪಡೆದ ನಂತರವೇ ಬಿಲ್ ಪಾವತಿ ಮಾಡಬೇಕಾಗುತ್ತಿದೆ. ಆದರೆ ಬಿಲ್ ಪಾವತಿಗೆ ಯಾವುದೇ ಮಾನದಂಡಗಳು ಪುರಸಭೆ ಅಧಿಕಾರಿಗಳಿಗೆ ಅನ್ವಯವಾಗುದಿಲ್ಲವೇ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿವೆ.
ಪಟ್ಟಣದಲ್ಲಿ ನಡೆದಿರುವ 15ನೇ ಹಣಕಾಸು ಆಯೋಗದ ಅನುದಾನದ ಕಾಮಗಾರಿಗಳು ಕಳಪೆಮಟ್ಟದಿಂದ ನಡೆದಿದ್ದು ಗುತ್ತಿಗೆದಾರರು ಮನಬಂದಂತೆ ಕೆಲಸ ಮಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ಗಮನಹರಿಸಬೇಕುಆಂಜನೇಯ ಭಂಡಾರಿ, ಕರೆವೇ ಅಧ್ಯಕ್ಷ, ಲಿಂಗಸುಗೂರು
ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಶೀಘ್ರವೇ ಥರ್ಡ್ ಪಾರ್ಟಿಯಿಂದ ಕಾಮಗಾರಿ ಪರಿಶೀಲನೆ ಮಾಡಿಸುವೆ, ಟೆಂಡರ್ ನಿಯಮ ಮೀರಿದರೆ ಕಾಮಗಾರಿ ಮಾಡಿದ್ದರೆ ಸೂಕ್ತ ಕ್ರಮ ಜರಗಿಸುವೆಈರಣ್ಣ ಬಿರಾದರ, ಜಿಲ್ಲಾ ಯೋಜನಾ ನಿರ್ದೇಶಕ, ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.