ADVERTISEMENT

ರಾಯಚೂರು: ನಗರಸಭೆ ಸದಸ್ಯನ ಕೊಲೆ, ಆರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:26 IST
Last Updated 29 ಸೆಪ್ಟೆಂಬರ್ 2020, 16:26 IST
ಮೊಹ್ಮದ್‌ ಶಾಲಂ
ಮೊಹ್ಮದ್‌ ಶಾಲಂ   

ರಾಯಚೂರು: ನಗರದ ವಾರ್ಡ್‌ ಸಂಖ್ಯೆ 8 ರ ನಗರಸಭೆ ಸದಸ್ಯ ಮೊಹ್ಮದ್‌ ಶಾಲಂ ಅಲಿಯಾಸ್‌ ಮಕ್ಬೂಲ್‌ (45) ಅವರನ್ನು ಹಳೆ ದ್ವೇಷಸಾಧಿಸಿ ಸೋಮವಾರ ತಡರಾತ್ರಿ ಜಾಕೀರ್‌ಹುಸೇನ್‌ ವೃತ್ತದಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದ್ದು, ಕೂಡಲೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರು ಆರೋಪಿಗಳನ್ನು ರಾತ್ರಿಯೇ ಬಂಧಿಸಿದ್ದಾರೆ.

ಸಿಯಾತಾಲಾಬ್‌ ನಿವಾಸಿಗಳಾದ ಗೋರಾ ಮಾಸೂಮ್‌, ರಿಯಾಜ್‌, ಸೈಯದ್‌ ಅಪ್ಸರ್‌, ಮೊಹ್ಮದ್‌ ಯಾಸೀನ್‌, ಅಜಿಮುದ್ದೀನ್‌ ಮತ್ತು ಕಾಶಿನಾಥ ಬಂಧಿತ ಆರೋಪಿಗಳು. ಬಚ್ಚಿಟ್ಟಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಳ್ಳಲು ಹೋಗಿದ್ದ ವೇಳೆ ಆರೋಪಿಗಳಾದ ರಿಯಾಜ್‌ ಮತ್ತು ಸೈಯದ್‌ ಅಜಮೀನ್‌ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಇಬ್ಬರ ಕಾಲಿಗೂ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಘಟನೆಯಲ್ಲಿ ಕಾನ್‌ಸ್ಟೇಬಲ್‌ಗಳಾದ ಚಂದ್ರಕಾಂತ ಮತ್ತು ಯಲ್ಲಪ್ಪ ಅವರ ಕೈಗಳಿಗೆ ಮಾರಕಾಸ್ತ್ರಗಳು ತಗುಲಿವೆ. ಗಾಯಗೊಂಡವರನ್ನೆಲ್ಲ ಚಿಕಿತ್ಸೆಗಾಗಿ ರಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ನಿಕ್ಕಂ ತಿಳಿಸಿದ್ದಾರೆ.

ಕೊಲೆಗೀಡಾದ ಮೊಹ್ಮದ್‌ ಶಾಲಂ ಅವರ ಕಿರಿಯ ಸಹೋದರ ಸಾದಿಕ್‌ ಪಾಷಾ ಅವರನ್ನು ಕಳೆದ ಜನವರಿಯಲ್ಲಿ ಕೊಲೆಮಾಡಿ ರೈಲ್ವೆ ಹಳಿಗೆ ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ಗೋರ್‌ ಮಾಸೂಮ್‌, ತನ್ನ ವಿರುದ್ಧ ದೂರು ನೀಡಿದ್ದಕ್ಕಾಗಿ ಮೊಹ್ಮದ್‌ ಶಾಲಂ ವಿರುದ್ಧ ದ್ವೇಷ ಸಾಧಿಸುತ್ತಾ ಬಂದಿರುವುದು ಈ ಕೊಲೆಗೆ ಕಾರಣ ಎಂದು ಸದರ್ ಬಜಾರ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.