ಅಮಾನತು
ರಾಯಚೂರು: ‘ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಹಲ್ಲೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ನಾಗರಾಜ ಮೆಕಾ ಹಾಗೂ ಪಿಎಸ್ಐ ಮಂಜುನಾಥ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ಶಿಫಾರಸು ಮಾಡಲಾಗಿದೆ’ ಎಂದು ಬಳ್ಳಾರಿ ವಲಯದ ಐಜಿಪಿ ಲೋಕೇಶಕುಮಾರ ತಿಳಿಸಿದರು.
‘ಸಿಐಡಿ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕೌಟುಂಬಿಕ ಕಲಹದ ಕಾರಣ ಈಶ್ವರ ನಗರದ ನಿವಾಸಿ ಈರೇಶ ಅವರ ಪತ್ನಿ ನರಸಮ್ಮ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿ ಆರೋಪಿಯನ್ನು ಬಿಡುಗಡೆ ಮಾಡಲಾಗಿತ್ತು. ನರಸಮ್ಮ 112ಕ್ಕೆ ಕರೆ ಮಾಡಿದ್ದರಿಂದ ಪಶ್ಚಿಮ ಠಾಣೆ ಪೊಲೀಸರು ಈರೇಶನನ್ನು ಮತ್ತೆ ವಿಚಾರಣೆಗೆ ಕರೆ ತಂದಿದ್ದರು. ನಂತರ ಅಸ್ವಸ್ಥಗೊಂಡಿದ್ದ ಈರೇಶನನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರು ಕೊನೆಯುಸಿರೆಳೆದಿದ್ದರು.
‘ಸಿಪಿಐ ನಾಗರಾಜ ಮೇಕಾ ಹಾಗೂ ಪಿಎಸ್ಐ ಮಂಜುನಾಥ ಹಲ್ಲೆ ಮಾಡಿದ್ದರಿಂದಲೇ ಈರೇಶ ಮೃತಪಟಿದ್ದಾರೆ’ ಎಂದು ಅವರ ಸಹೋದರಿ ಜ್ಯೋತಿ ದೂರು ನೀಡಿದ್ದರು. ಈರೇಶ ಕುಟುಂಬದ ಸದಸ್ಯರು ಹಾಗೂ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್‌ಪಿ ಕಚೇರಿ ಎದುರು ಮಂಗಳವಾರ ರಾತ್ರಿ ಪ್ರತಿಭಟಿಸಿದ್ದರು.
ಶವಾಗಾರಕ್ಕೆ ನ್ಯಾಯಾಧೀಶ ಭೇಟಿ: ಪ್ರಕರಣದ ಕುರಿತು ಮಾಹಿತಿ ಪಡೆಯಲು ರಾಯಚೂರು ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿದ್ರಾಮಪ್ಪ ಕಲ್ಯಾಣರಾವ್ ರಿಮ್ಸ್‌ನ ಶವಾಗಾರಕ್ಕೆ ಭೇಟಿ ನೀಡಿದರು.
ಈರೇಶ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಂದ ಮಾಹಿತಿ ಕಲೆ ಹಾಕಿದರು. ತಹಶೀಲ್ದಾರ್ ಸುರೇಶ ವರ್ಮಾ, ತಾಲ್ಲೂಕು ಪಂಚಾಯಿತಿ ಇಇ ಚಂದ್ರಶೇಖರ ಪವಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.