ADVERTISEMENT

‘ಅಂತಿಮ ಸಂಸ್ಕಾರ’ಕ್ಕಾಗಿ ಜನರ ಪರದಾಟ

ನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸ್ಮಶಾನ ಜಾಗದ ಕೊರತೆ

ಬಾವಸಲಿ
Published 19 ಏಪ್ರಿಲ್ 2021, 4:24 IST
Last Updated 19 ಏಪ್ರಿಲ್ 2021, 4:24 IST
ರಾಯಚೂರು ನಗರದಲ್ಲಿ ಮಡಿವಾಳ ಮಾಚಿದೇವ ದೇವಸ್ಥಾನದ ಬಳಿ ಇರುವ ಸ್ಮಶಾನದಲ್ಲಿ ಗಿಡಗಂಟಿಗಳು ಬೆಳೆದಿರುವುದು
ರಾಯಚೂರು ನಗರದಲ್ಲಿ ಮಡಿವಾಳ ಮಾಚಿದೇವ ದೇವಸ್ಥಾನದ ಬಳಿ ಇರುವ ಸ್ಮಶಾನದಲ್ಲಿ ಗಿಡಗಂಟಿಗಳು ಬೆಳೆದಿರುವುದು   

ರಾಯಚೂರು: ನಗರ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿರುವ ಜಲಾಲ್ ನಗರ, ಸವಿತಾ ನಗರ, ಮಕ್ತಲ್ ಪೇಟೆಯಲ್ಲಿ ಜನಸಂಖ್ಯೆಯ ಅನುಗುಣವಾಗಿ ಸ್ಮಶಾನದಲ್ಲಿ ಸ್ಥಳದ ಲಭ್ಯತೆ ಆಗುತ್ತಿಲ್ಲ. ಅಂತಿಮ ಸಂಸ್ಕಾರದ ವೇಳೆ ಜಾಗದ ಅಭಾವವು ಜನರನ್ನು ಸಮಸ್ಯೆಯಾಗಿ ಕಾಡುತ್ತಿದೆ.

ಈ ಪ್ರದೇಶಗಳಲ್ಲಿ ಬಹುತೇಕ ಸವಿತಾ ಸಮಾಜ, ಮಡಿವಾಳರ ಸಮಾಜ, ಕುರುಬ, ಗಂಗಾಮತಸ್ಥ, ಭೋವಿ ಹಾಗೂ ಇತರೆ ಹಿಂದುಳಿದ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಪರಿಶಿಷ್ಟರು ವಾಸವಾಗಿದ್ದಾರೆ. ಅಂದಾಜು 50 ಸಾವಿರ ಜನಸಂಖ್ಯೆ ಇದೆ. ಯಾರಾದರೂ ಸಾವನ್ನಪ್ಪಿದರೆ ಜಲಾಲ್ ನಗರ ಹಾಗೂ ಮಡ್ಡಿಪೇಟೆಯ ಬಡಾವಣೆಯ ಮಧ್ಯೆದ ಮಡಿವಾಳ ಮಾಚಿದೇವ ದೇವಸ್ಥಾನದ ಬಳಿ ಇರುವ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತಿದೆ. ಈ ಮೊದಲು ಸುಮಾರು 5 ಎಕರೆ ಇದ್ದ ಸ್ಮಶಾನ ಸ್ಥಳೀಯ ಹಾಗೂ ಪ್ರಭಾವಿಗಳ ಒತ್ತುವರಿಯಿಂದಾಗಿ ಈಗ ಕೇವಲ 1.5 ಎಕರೆಗೆ ಕಡಿಮೆಯಾಗಿದೆ. ಸ್ಥಳದ ಅಭಾವದಿಂದ ಹೂಳಿದ ಜಾಗದಲ್ಲಿಯೇ ಮತ್ತೊಂದು ಹೂಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಜನರ ಅಳಲು.

ಯಾರೇ ನಿಧನರಾದರೂ ಅವರ ಪಾರ್ಥಿವ ಶರೀರಕ್ಕೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ಎಲ್ಲಾ ಧರ್ಮಗಳಲ್ಲೂ ಇರುವ ಸಂಪ್ರದಾಯ. ಆದರೆ ಅದಕ್ಕೆ ಸೂಕ್ತ ಸ್ಮಶಾನದ ವ್ಯವಸ್ಥೆ ಮುಖ್ಯವಾಗಿದೆ. ಆದರೆ ಸ್ಥಳೀಯ ನಗರಾಡಳಿತ ಸಂಸ್ಥೆಗಳು ಈ ದಿಸೆಯಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ. ಲಭ್ಯವಿರುವ ಸ್ಮಶಾನದಲ್ಲಿಯೆ ಜಾಲಿಗಿಡಗಳು ದೊಡ್ಡದಾಗಿ ಬೆಳೆದಿದ್ದು, ಗುಡ್ಡಕ್ಕೆ ಹೊಂದಿಕೊಂಡಿದ್ದರಿಂದ ಗುಂಡಿ ತೋಡಲು ಸಮಸ್ಯೆಯಾಗುತ್ತಿದೆ.

ADVERTISEMENT

‘ಸ್ಮಶಾನದ ಕೊರತೆಯಿಂದಾಗಿ ಹೂಳಿದ ಸ್ಥಳದಲ್ಲಿಯೇ ಶವಗಳ ಹೂಳಲಾಗುತ್ತಿದೆ. ಪ್ರಸ್ತುತ ಸ್ಮಶಾನಕ್ಕೆ ಸೂಕ್ತ ಹದ್ದು ಬಸ್ತು, ತಂತಿ ಬೇಲಿ ಇರದ ಕಾರಣ ಒತ್ತುವರಿಯಾಗುತ್ತಿದೆ. ಸವಿತಾ ಸಮಾಜಕ್ಕೆ ಪ್ರತ್ಯೇಕವಾಗಿ 2 ಎಕರೆ ಅಥವಾ ಹಿಂದುಳಿದ ಸಮಾಜಕ್ಕೆ ಸೇರಿದಂತೆ 20 ಎಕರೆ ವಿಸ್ತಾರವಾದ ಅರಣ್ಯ ಭೂಮಿ ಗುರುತಿಸಿ ಸ್ಮಶಾನ ನಿರ್ಮಿಸಬೇಕು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ನರಸಿಂಹಲು ಮಡ್ಡಿಪೇಟೆ.

ರಾಜ್ಯ ಸರ್ಕಾರ ಈಚೆಗೆ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕೊರತೆಯಾಗದಂತೆ ಸರ್ಕಾರದ ಅರಣ್ಯ, ಗುಡ್ಡಗಾಡು, ಗೋಮಾಳ ಭೂಮಿ ಗುರುತಿಸಿ ಜನಸಂಖ್ಯೆಯ ಅನುಗುಣವಾಗಿ ಸ್ಮಶಾನ ನಿರ್ಮಿಸಿ ಅಂತಿಮ ವಿದಾಯಕ್ಕೆ ಗೌರವಯುತವಾಗಿ ನಡೆಯುವಂತಾಗಬೇಕು ಎಂದು ಉದ್ದೇಶಿಸಿ ತಹಶೀಲ್ದಾರರ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸಲು ಮುಂದಾಗಿದೆ.

ಜಿಲ್ಲೆಯಲ್ಲಿನ ಸ್ಮಶಾನ ಸಮಸ್ಯೆಯ ಕುರಿತಾಗಿ ಕಂದಾಯ ಸಚಿವ ಆರ್.ಅಶೋಕ ಅವರು ಜಿಲ್ಲೆಗೆ ಭೇಟಿ ನೀಡಿದಾಗ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಇರುವ ಕಡೆ ಅಗತ್ಯ ಕ್ರಮ ವಹಿಸಲು ತಹಶೀಲ್ದಾರರಿಗೆ ಸೂಚಿಸಿದ್ದರು.

ಕೆಲವು ದಿನ ಅಧಿಕಾರಿಗಳು ಈ ಬಗ್ಗೆ ಚುರುಕಾಗಿ ಕೆಲಸ ಮಾಡಿದ್ದರು. ನಗರದ ವ್ಯಾಪ್ತಿಯ ರಾಂಪೂರು, ಮಡ್ಡಿಪೇಟೆ ಸೇರಿದಂತೆ ಹಲವೆಡೆ ಸ್ಮಶಾನ ಜಾಗದ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಜಿಲ್ಲಾ ಕೇಂದ್ರದಲ್ಲಿಯೇ ಸ್ಮಶಾನದ ಸಮಸ್ಯೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.