ADVERTISEMENT

ಜಿಲ್ಲೆಯಲ್ಲಿ ಕ್ರಿಸ್‌ಮಸ್‌ ಸಂಭ್ರಮ: ವಿಶೇಷ ಪ್ರಾರ್ಥನೆ

ಕೇಕ್‌ ಕತ್ತರಿಸಿ ಯೇಸುಸ್ವಾಮಿ ಜನ್ಮದಿನ ಆಚರಿಸಿದ ಕ್ರೈಸ್ತ ಬಾಂಧವರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 12:27 IST
Last Updated 25 ಡಿಸೆಂಬರ್ 2018, 12:27 IST
ರಾಯಚೂರಿನ ರಾಂಪುರದಲ್ಲಿರುವ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ನಿಮಿತ್ತ ವಿಶೇಷ ಪ್ರಾರ್ಥನೆಗಳು ನಡೆದವು
ರಾಯಚೂರಿನ ರಾಂಪುರದಲ್ಲಿರುವ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ನಿಮಿತ್ತ ವಿಶೇಷ ಪ್ರಾರ್ಥನೆಗಳು ನಡೆದವು   

ರಾಯಚೂರು: ದೇವಾಂಶ ಸಂಭೂತ ಯೇಸುಕ್ರಿಸ್ತನ ಜನ್ಮದಿನದ ಪ್ರಯುಕ್ತ ಜಿಲ್ಲೆಯಾದ್ಯಂತ ಕ್ರೈಸ್ತರು ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.

ಹೊಸ ಬಟ್ಟೆ ಧರಿಸಿ ಸಂತಸದಿಂದ ಕೂಡಿದ್ದ ಜನರು ಗುಂಪು ಗುಂಪಾಗಿ ಚರ್ಚ್‌ಗಳತ್ತ ಧಾವಿಸುತ್ತಿರುವುದು ಮಂಗಳವಾರ ಬೆಳಿಗ್ಗೆಯಿಂದ ಸಾಮಾನ್ಯ ದೃಶ್ಯವಾಗಿತ್ತು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಆರಂಭವಾಗಿದ್ದವು. ಕೆಲವರು ಯೇಸು ಜನನದ ಸಂಕೇತವಾದ ಹೊಳೆಯುವ ನಕ್ಷತ್ರ (ಸ್ಟಾರ್‌) ಮಾದರಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದರು.

ರಾಂಪುರದಲ್ಲಿರುವ ವಿಶಾಲವಾದ ಜಿಲ್ಲಾ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಬಹಳಷ್ಟು ಭಕ್ತರು ನೆರೆದಿದ್ದರು. ಜಿಲ್ಲಾ ಚರ್ಚ್‌ ಮೇಲ್ವಿಚಾರಕ ರೆವರೆಂಡ್‌ ಎ. ಸ್ಯಾಮಸನ್‌ ಅವರು ಯೇಸುಕ್ರಿಸ್ತರ ಸಂದೇಶವನ್ನು ಸಾರಿದರು. ನೆರೆದಿದ್ದ ಭಕ್ತರೆಲ್ಲರು ಸಂದೇಶಗಳನ್ನು ಪುನರುಚ್ಚರಿಸಿ ಭಕ್ತಿಯಿಂದ ನಮಿಸಿದರು. ಯೇಸು ಜನ್ಮ ವೃತ್ತಾಂತವನ್ನು ವಿವರಿಸಿದರು.

ADVERTISEMENT

‘ಪಾಪಿ ಮಾನವರನ್ನು ಸಂರಕ್ಷಣೆ ಮಾಡುವುದಕ್ಕಾಗಿ ದೇವರು ದೇವಮಾನವನನ್ನು ಭೂಮಿಗೆ ಬಿಟ್ಟ ದಿನವನ್ನು ಕ್ರಿಸ್‌ಮಸ್‌ ಎಂದು ಆಚರಿಸಲಾಗುತ್ತಿದೆ. ಪಾಪಿಗಳ ಉದ್ಧಾರಕ್ಕಾಗಿ ಯೇಸುವನ್ನು ದೇವರು ಉಡುಗೊರೆಯಾಗಿ ನೀಡಿದ ಸುದಿನ ಇದು. ಇಡೀ ಪ್ರಪಂಚದಲ್ಲಿ ಈ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ’ ಎಂದು ರೆವರೆಂಡ್‌ ಎ. ಸ್ಯಾಮಸನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆಶಾಪುರ ಮಾರ್ಗದಲ್ಲಿರುವ ಅಗಾಪೆ ಚರ್ಚ್‌ನಲ್ಲಿಯೂ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂತು. ವರ್ಣವೈವಿಧ್ಯ ಬಲೂನ್‌ಗಳಿಂದ ಚರ್ಚ್ ಗೋಡೆಗಳನ್ನು ಸಿಂಗರಿಸಲಾಗಿತ್ತು. ವರ್ಣಮಯ ವಿದ್ಯುತ್‌ ದೀಪಗಳಿಂದ ಸಿಲುಬೆಯನ್ನು ಅಲಂಕಾರ ಮಾಡಲಾಗಿತ್ತು. ಪ್ರಾರ್ಥನೆ ಸಲ್ಲಿಸಲು ಬರುತ್ತಿದ್ದ ಜನರು ಎದೆ ಮೇಲೆ ಕೈಯಿಟ್ಟುಕೊಂಡು ಸಂಕಲ್ಪ ಮಾಡುತ್ತಿದ್ದರು.

ಬಾಲಯೇಸು ಶಿಕ್ಷಣ ಸಂಸ್ಥೆ ಕ್ಯಾಂಪಸ್‌ ಪಕ್ಕದಲ್ಲಿರುವ ಸೇಂಟ್‌ ಮೇರಿ ಚರ್ಚ್‌ನಲ್ಲಿ ಸಂಭ್ರಮ, ಸಡಗರ ಮನೆಮಾಡಿತ್ತು. ಭಕ್ತರು ಮೇಣದ ಬತ್ತಿ ಉರಿಸಿ ಭಕ್ತಿಯಿಂದ ನಮಿಸುತ್ತಿರುವುದು ಕಂಡುಬಂತು. ಸ್ಟೇಷನ್‌ ರಸ್ತೆಯಲ್ಲಿರುವ ಸೇಂಟ್‌ ಪ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ನಲ್ಲಿಯೂ ವಿಶೇಷ ಪ್ರಾರ್ಥನೆಗಳು ನಡೆದವು.

ಯೇಸು ಜನಿಸಿದ ಬೆತ್ಲೇಹಿಮ್‌ ಹಳ್ಳಿಯ ಮಾದರಿಯನ್ನು ನಿರ್ಮಿಸಿದ್ದು ಆಕರ್ಷಕವಾಗಿತ್ತು. ಭತ್ತದ ಹುಲ್ಲಿನಿಂದ ಚಪ್ಪರ ನಿರ್ಮಾಣ ಮಾಡಿ, ಅದರಲ್ಲಿ ದನಕರು ಮಾದರಿ ಬೊಂಬೆಗಳನ್ನಿಟ್ಟು ಗೋದಲಿ ಮಾಡಲಾಗಿತ್ತು.

ನಗರದ ಅನೇಕ ಕಡೆಗಳಲ್ಲಿ ಶುಭಾಶಯ ಕೋರುವ ಫ್ಲೇಕ್ಸ್‌ಗಳನ್ನು ಹಾಕಲಾಗಿತ್ತು. ನಗರಸಭೆಗೆ ಆಯ್ಕೆಯಾದ ವಾರ್ಡ್‌ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕ್ರಿಸ್‌ಮಸ್‌ ಹಬ್ಬದ ಶುಭಾಶಯ ಕೋರಿದ ಫ್ಲೇಕ್ಸ್‌ಗಳು ರಾರಾಜಿಸುತ್ತಿವೆ. ಬಸವೇಶ್ವರ ವೃತ್ತದಿಂದ ಆರ್‌ಟಿಒ ವೃತ್ತದವರೆಗೂ ಫ್ಲೇಕ್ಸ್‌ಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.