ADVERTISEMENT

ಓಪೆಕ್‌ ಸುಧಾರಣೆ ಜಿಲ್ಲಾಧಿಕಾರಿಗೆ ಹೊಣೆ: ಸಚಿವ ಹಾಲಪ್ಪ ಆಚಾರ

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:06 IST
Last Updated 27 ಸೆಪ್ಟೆಂಬರ್ 2021, 16:06 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಮೊದಲಬಾರಿ ಜಿಲ್ಲೆಗೆ ಭೇಟಿನೀಡಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಶಾಸಕರಾದ ಬಸನಗೌಡ ದದ್ದಲ, ಡಿ.ಎಸ್‌.ಹುಲಗೇರಿ, ಬಸನಗೌಡ ತುರ್ವಿಹಾಳ, ಬಸವರಾಜ ಪಾಟೀಲ ಇಟಗಿ, ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಇದ್ದರು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಮೊದಲಬಾರಿ ಜಿಲ್ಲೆಗೆ ಭೇಟಿನೀಡಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಶಾಸಕರಾದ ಬಸನಗೌಡ ದದ್ದಲ, ಡಿ.ಎಸ್‌.ಹುಲಗೇರಿ, ಬಸನಗೌಡ ತುರ್ವಿಹಾಳ, ಬಸವರಾಜ ಪಾಟೀಲ ಇಟಗಿ, ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಇದ್ದರು   

ರಾಯಚೂರು: ಓಪೆಕ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗಳನ್ನು ಸುಧಾರಿಸಿ ಅಭಿವೃದ್ಧಿ ಮಾಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಶಾಸಕರು ಈಗಾಗಲೇ ಆರೋಗ್ಯ ಸಚಿವರೊಂದಿಗೆ ಬೆಂಗಳೂರಿನಲ್ಲಿ ಚರ್ಚಿಸಿದ್ದಾರೆ. ಆದರೆ, ಜಿಲ್ಲಾಮಟ್ಟದಲ್ಲಿ ಆಸ್ಪತ್ರೆಯಲ್ಲಿ ಮಾಡಬೇಕಾದ ಸುಧಾರಣೆ ಕ್ರಮಗಳ ಕುರಿತು ಜಿಲ್ಲಾಧಿಕಾರಿಯೇ ಅಗತ್ಯ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಯಚೂರು ಎಂದರೆ ಬರೀ ರಿಮ್ಸ್‌ ಹಾಗೂ ಓಪೆಕ್‌ ಆಸ್ಪತ್ರೆ ವಿಷಯಗಳನ್ನೇ ಚರ್ಚಿಸುತ್ತಾ ಬರಲಾಗುತ್ತಿದೆ. ಅನುದಾನ ಇದ್ದರೂ ಅಗತ್ಯ ಕ್ರಮ ಜರುಗಿಸಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಸುಧಾರಿಸುವುದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಕೂಡಾ ಓಪೆಕ್‌ ಸುಧಾರಣೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಮುಂದಿನ ಮೂರು ವಾರಗಳಲ್ಲಿ ವ್ಯವಸ್ಥೆ ಬದಲಾವಣೆ ಮಾಡುವುದಕ್ಕೆ ಅವರು ಈಗಾಗಲೇ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲಾಧಿಕಾರಿಯು ಆಸ್ಪತ್ರೆಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸುವುದಕ್ಕೆ ಡಿಎಂಎಫ್‌ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಓಪೆಕ್‌ ಹಾಗೂ ರಿಮ್ಸ್‌ ಆಸ್ಪತ್ರೆಗಳ ಸುಧಾರಣೆಗೆ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿ ಪ್ರಯತ್ನಿಸೋಣ. ಹಂತಹಂತವಾಗಿ ಸುಧಾರಣೆ ಕೆಲಸ ಮಾಡಬೇಕಿದೆ ಎಂದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಓಪೆಕ್‌ ಆಸ್ಪತ್ರೆಯು ಆರಂಭದಲ್ಲಿ ಮಾದರಿ ಆಸ್ಪತ್ರೆಯಾಗಿತ್ತು. ಪಕ್ಕದ ರಾಜ್ಯಗಳಿಂದಲೂ ಜನರು ಚಿಕಿತ್ಸೆಗಾಗಿ ಬರುತ್ತಿದ್ದರು. ರಾಜ್ಯದಲ್ಲಿ ಈ ಹಿಂದೆ ಸರ್ಕಾರವು ಓಪೆಕ್‌ ಆಡಳಿತ ವ್ಯವಸ್ಥೆ ಬದಲಾವಣೆ ಮಾಡಿದ ಬಳಿಕ ಸೇವೆಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಈಗಲೂ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ ಒದಗಿಸುವ ಯಂತ್ರಗಳಿವೆ. ತಜ್ಞ ವೈದ್ಯರಿದ್ದಾರೆ ಎಂದರು.

ಓಪೆಕ್‌ ಆಸ್ಪತ್ರೆಯಲ್ಲಿ ಮುಖ್ಯವಾಗಿ ಸ್ವಚ್ಛತೆ ಕಾಪಾಡುವ ಕೆಲಸ ಆಗಬೇಕಿದೆ. ಈಗಿರುವ ಗ್ರುಪ್‌ ‘ಡಿ’ ಸಿಬ್ಬಂದಿಯನ್ನು ದ್ವಿಗುಣ ಮಾಡಬೇಕು. ತಳಮಟ್ಟದಲ್ಲಿ ಆಗುತ್ತಿರುವ ತಪ್ಪಿನಿಂದ ತಜ್ಞ ವೈದ್ಯರು ನೀಡುತ್ತಿರುವ ಸೇವೆಗೆ ಬೆಲೆ ಇಲ್ಲದಂತಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಕೂಡಲೇ ಹೆಚ್ಚುವರಿಯಾಗಿ ಸ್ವಚ್ಛತಾ ಸಿಬ್ಬಂದಿ ನೇಮಕಕ್ಕೆ ಜಿಲ್ಲಾಧಿಕಾರಿ ಪ್ರಸ್ತಾವನೆ ಕಳುಹಿಸಿ ಅನುಮತಿ ಪಡೆದುಕೊಳ್ಳಬೇಕು. ಹೊರಗುತ್ತಿಗೆ ಪಡೆದವರು ಶೇ 10 ರಷ್ಟು ಹಣ ಹಿಡಿದುಕೊಳ್ಳುತ್ತಾರೆ. ಸ್ವಚ್ಛತೆಗಾಗಿ ಖರ್ಚು ಮಾಡುವುದಕ್ಕೆ ಹಿಂದೇಟು ಹಾಕಬಾರದು. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಚಿಕಿತ್ಸೆ ದೊರಕಿಸಬೇಕಿದೆ. ಹೊಸದಾಗಿ ಮೂರು ಲಿಫ್ಟ್‌ಗಳನ್ನು ಅಳವಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಅನುದಾನದಲ್ಲಿ ₹6 ಕೋಟಿ ಬಡ್ಡಿ ಹಣದಲ್ಲಿ ಲಿಫ್ಟ್‌ ಅಳವಡಿಸಲು ಸಾಧ್ಯವಿದ್ದರೆ ಪರಿಶೀಲಿಸಿರಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಮಾತನಾಡಿ, ಓಪೆಕ್‌ ವಿಶೇಷ ಅಧಿಕಾರಿಯು ರಿಮ್ಸ್‌ ನಿರ್ದೇಶಕರ ಸೂಚನೆ ಅನುಸರಿಸಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನು ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ನಿರ್ಧರಿಸಲಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಲಾಗುತ್ತಿಲ್ಲ. ಸಚಿವರ ಸೂಚನೆಯ ಪ್ರಕಾರ, ಇನ್ನು ಮುಂದೆ ನೇರವಾಗಿ ಇಲಾಖೆಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಓಪೆಕ್‌ ಸುಧಾರಣೆಗೆ ಕ್ರಮ ಜರುಗಿಸಲಾಗುವುದು. ವಾರಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸ್ವಚ್ಛತಾ ಸಿಬ್ಬಂದಿ ಹೆಚ್ಚುವರಿ ನೇಮಕಕ್ಕೆ ಪರಿಶೀಲಿಸಿ ಪ್ರಸ್ತಾವನೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚು ಸದೃಢ ಮಾಡಿದರೆ, ರಿಮ್ಸ್ ಮೇಲಿನ ಹೊರೆ ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.