ADVERTISEMENT

ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ನೀರು‌ ಹರಿಸಿ: ಎನ್.ಎಸ್.ಬೋಸರಾಜು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 13:48 IST
Last Updated 18 ಮಾರ್ಚ್ 2022, 13:48 IST
ತುಂಗಭದ್ರಾ ಎಡದಂಡೆ ಕಾಲುವೆಯ ಮಸ್ಕಿ ಬಳಿಯ ಮೈಲ್ 69 ರಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಮಾಜಿ ಶಾಸಕ ಎನ್.ಎಸ್.ಬೋಸರಾಜು, ಹಂಪಯ್ಯ ನಾಯಕ ಶುಕ್ರವಾರ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು
ತುಂಗಭದ್ರಾ ಎಡದಂಡೆ ಕಾಲುವೆಯ ಮಸ್ಕಿ ಬಳಿಯ ಮೈಲ್ 69 ರಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಮಾಜಿ ಶಾಸಕ ಎನ್.ಎಸ್.ಬೋಸರಾಜು, ಹಂಪಯ್ಯ ನಾಯಕ ಶುಕ್ರವಾರ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು   

ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆಯ ಮಾನ್ವಿ, ಸಿರವಾರ ಹಾಗೂ ರಾಯಚೂರು ಕೊನೆ ಭಾಗದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ಎರಡು ದಿನಗಳಲ್ಲಿ ನೀರು ಹರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಒತ್ತಾಯಿಸಿದರು.

ಶುಕ್ರವಾರ ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 69ರಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಲ್ 69 ರಲ್ಲಿ 9.2 ಅಡಿ ನೀರು ಹರಿದರೆ ಮಾತ್ರ ಕೊನೆ ಭಾಗಕ್ಕೆ ನೀರು ತಲುಪಲು ಸಾಧ್ಯ, ಮೈಲ್ 47 ರ ಮೇಲ್ಭಾಗದಲ್ಲಿ ಹೆಚ್ಚು ನೀರು ಬಳಕೆ ಮಾಡುತ್ತಿದ್ದರಿಂದ ಇಲ್ಲಿ‌ ನೀರು ಎರಡು ಅಡಿ ಕಡಿಮೆ ಹರಿಯುತ್ತಿದೆ, ಇದರಿಂದ ಕೊನೆ ಭಾಗದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ನೀರಾವರಿ ನಿಗಮದ ಮುನಿರಾಬಾದ್ ವೃತ್ತದ ಮುಖ್ಯ ಎಂಜನಿಯರ್ ಅವರಿಗೆ ದೂರವಾಣಿಯಲ್ಲಿ ಮಾತನಾಡಿ, ನೀರಿನ ಪ್ರಮಾಣ ಹೆಚ್ಚಿಸಿ ಮೈಲ್ 69 ರಲ್ಲಿ‌ 9.2 ನೀರು ಹರಿಯುವಂತೆ ಕೋರಲಾಗಿದೆ ಎಂದರು.

ADVERTISEMENT

ಶನಿವಾರ ಸಂಜೆ ವೇಳೆಗೆ ನೀರಿ ಪ್ರಮಾಣ ಹೆಚ್ಚಿಸಿ ಕೊನೆ ಭಾಗದ ರೈತರಿಗೆ ನೀರು ಕೊಡುವ ಭರವಸೆ ನೀಡಿದ್ದಾರೆ ಎಂದು ಎನ್.ಎಸ್. ಬೋಸರಾಜು ತಿಳಿಸಿದರು.

ಕಾಲುವೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಕಾಯ್ದುಕೊಳ್ಳಲು ಅಧಿಕಾರಿಗಳಿಂದ ಆಗುತ್ತಿಲ್ಲ‌. ಜಿಲ್ಲಾಧಿಕಾರಿಗಳು ಒಂದೇರಡು ದಿನಗಳಲ್ಲಿ ನೀರಾವರಿ ನಿಗಮದ ಯರಮರಸ್ ವೃತ್ತದ ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಾಗಿ ಕೊನೆ‌ ಭಾಗದ ರೈತರಿಗೆ ನೀರು ಕೊಡಲು ಮುಂದಾಬೇಕು ಎಂದು ಒತ್ತಾಯಿಸಿದರು.

ಒಂದೇರಡು ದಿನಗಳಲ್ಲಿ ನೀರು ತಲುಪಿಸದಿದ್ದರೆ ಕೊನೆ‌ ಭಾಗದ ರೈತರು ಪ್ರತಿಭಟಿಸುವರು ಎಂದು ಎಚ್ಚರಿಸಿದರು.

ಮಾಜಿ ಶಾಸಕ ಹಂಪಯ್ಯ ನಾಯಕ ಸಾಹುಕಾರ, ಮುಖಂಡ ಕಿರಿ ಲಿಂಗಪ್ಪ, ನೀರಾವರಿ ನಿಗಮದ ಅಧಿಕಾರಿಗಳಾದ ದಾವುದ್, ಕುಮಾರಸ್ವಾಮಿ ಇತರರು ಇದ್ದರು.

ಕೊನೆ ಭಾಗದ ನೂರಕ್ಕೂ ಹೆಚ್ಚು ರೈತರು ಕಾಲುವೆ ಮೇಲೆ ಜಮಾಯಿಸಿದ್ದರು.


ನೀರು ಕೊಡದಿದ್ದರೆ ರಸ್ತೆ ತಡೆ

ಎಡದಂಡೆ ಕಾಲುವೆಯ ಕೊನೆ ಭಾಗದ ರೈತರಿಗೆ ಎರಡು ದಿನಗಳಲ್ಲಿ ನೀರು ಕೊಡದಿದ್ದರೆ ಸಾವಿರಾರು ರೈತರು ಸೇರಿ ರಸ್ತೆ ತಡೆ ನಡೆಸಲಾಗುವುದು ಎಂದು ಮಾಜಿ ಶಾಸಕ ಹಂಪಯ್ಯ ನಾಯಕ ಸಾಹುಕಾರ ಅಧಿಕಾರಿಗಳಿಗೆ ಎಚ್ಚರಿಸಿದರು.

ಕಾಲುವೆ ನೀರಿನ ಪ್ರಮಾಣ ಪರಿಶೀಲನೆ ವೇಳೆ ಇದುವರೆಗೂ ನೀಮಗೆ ಕೊನೆ ಭಾಗದ ರೈತರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಬರಿ ಸುಳ್ಳು ಹೇಳಿ ದಿನ ದೂಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎರಡು ದಿನ ಕಾಯುತ್ತೇವಿ, ಕೊನೆ ಭಾಗಕ್ಕೆ ನೀರು ಹರೆಯದೆ ಇದ್ದರೆ ನಾವು ಬೀದಿಗೆ ಇಳಿಯುತ್ತೇವೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.