ADVERTISEMENT

ರಾಯಚೂರು | 'ಮಹಾನಗರ ಪಾಲಿಕೆ ವಿಸ್ತೀರ್ಣದ ಮಾಹಿತಿ ನೀಡಲು ಒತ್ತಾಯ'

​ಪ್ರಜಾವಾಣಿ ವಾರ್ತೆ
Published 27 ಮೇ 2025, 14:29 IST
Last Updated 27 ಮೇ 2025, 14:29 IST

ರಾಯಚೂರು: ‘ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಈ ಭಾಗದ ಜನರ ಕನಸು ನನಸಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಹಳ್ಳಿಗಳನ್ನು ಸೇರಿಸಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರೆ ನಗರ ಹಾಗೂ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ’ ಎಂದು ‌ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಅಸ್ಕಿಹಾಳ ತಿಳಿಸಿದರು.

‘ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿ ಹಲವು ದಿನಗಳು ಕಳೆದಿವೆ. ಆದರೂ ಅದರ ವ್ಯಾಪ್ತಿಯ ಕುರಿತು ಜನರಿಗೆ ಮಾಹಿತಿ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಜನರಿಗೆ ಮಾಹಿತಿ ನೀಡಬೇಕು’ ಎಂದು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮಹಾನಗರ ಪಾಲಿಕೆ ಆಗಿ ಮೇಲ್ದರ್ಜೆಗೇರಿದ ಕಾರಣ ಉದ್ದಿಮೆಗಳು ಹಾಗೂ ಜನಪ್ರತಿನಿಧಿಗಳು ರೈತರ ಜಮೀನನ್ನು ಖರೀದಿಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬಾಳುವ ಜಮೀನನ್ನು ಕಡಿಮೆ ಬೆಲೆಗೆ ‌ಖರೀದಿ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ರಾಯಚೂರು ಮಹಾನಗರ ಪಾಲಿಕೆ ವಿಸ್ತೀರ್ಣದ ಮಾಹಿತಿ ನೀಡಿದರೆ ರೈತರು ಜಮೀನು ಮಾರಾಟ ಮಾಡುವುದನ್ನು ನಿಲ್ಲಿಸಬಹುದು. ಜನರಿಗೆ ಆಗುವ ಆರ್ಥಿಕ ನಷ್ಟವನ್ನು ತಡೆಯಬಹುದು’ ಎಂದರು.

ADVERTISEMENT

ರಾಘವೇಂದ್ರ, ಶಿವರಾಮಗೌಡ, ವೆಂಕಟೇಶ ಮಡಿವಾಳ, ನರೇಂದ್ರ, ದೂಳಯ್ಯ, ವಿರೂಪಾಕ್ಷಿ ಹಾಗೂ ನರಸಿಂಹಲು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.