ADVERTISEMENT

ಬೆಳೆಹಾನಿ ಪರಿಹಾರಕ್ಕೆ ಆಗ್ರಹ: ರೈತ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ

ಸಿಪಿಎಂ ಕಾರ್ಯಕರ್ತರು, ರೈತ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 3:55 IST
Last Updated 23 ಸೆಪ್ಟೆಂಬರ್ 2020, 3:55 IST
ರಾಯಚೂರಿನಲ್ಲಿ ಸಿಪಿಐ (ಎಂ) ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು (ಎಡಚಿತ್ರ). ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು
ರಾಯಚೂರಿನಲ್ಲಿ ಸಿಪಿಐ (ಎಂ) ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು (ಎಡಚಿತ್ರ). ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು   

ರಾಯಚೂರು: ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು ರೈತರಿಗೆ ಎಕರೆಗೆ ತಲಾ ₹ 20 ಸಾವಿರ ಹಾಗೂ ಮನೆಗಳನ್ನು ಕಳೆದುಕೊಂಡವರಿಗೆ ₹ 25 ಸಾವಿರ ಪರಿಹಾರ ನೀಡಿ, ಅವರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಸಿಪಿಎಂನ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಕಾರರು, ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜನವಸತಿ ಪ್ರದೇಶಗಳು ಜಲಾವೃತಕೊಂಡಿವೆ. ರಾಯಚೂರು ತಾಲ್ಲೂಕಿನ ಇಡಪನೂರು, ಗುಂಜಳ್ಳಿ, ತಲಮಾರಿ, ಯರಗುಂಟಾ ದೇವಸುಗೂರು ಗ್ರಾಮಗಳಲ್ಲಿ ಮಳೆಯಿಂದಾಗಿ ಮನೆಗಳು ಕುಸಿದುಬಿದ್ದಿವೆ. ನಗರದ ಪ್ರದೇಶದ ನೀರುಬಾವಿಕುಂಟಾ, ದೇವಿನಗರ, ಜಹೀರಾಬಾದ್, ಮಡ್ಡಿಪೇಟೆ, ಸಿಯಾತಲಾಬ್ ಬಡಾವಣೆಗಳಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ದೂರಿದರು.

ರಾಯಚೂರು ತಾಲ್ಲೂಕಿನಾದ್ಯಂತ ರೈತರ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳ ಹಾನಿಯಾಗಿದೆ. ಇದರಿಂದ ರೈತರ ಸಂಕಷ್ಟಕ್ಕೀಡಾಗಿದ್ದಾರೆ. ಯರಗುಂಟಾ ಗ್ರಾಮದಲ್ಲಿ ಎನ್‍ಆರ್‌ಬಿಸಿ ಕಾಲುವೆ ಒಡೆದು ಅಪಾರ ಬೆಳೆ ನಷ್ಟವಾಗಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ ವೀರೇಶ, ಎಚ್.ಪದ್ಮಾ, ಡಿ.ಎಸ್ ಶರಣಬಸವ, ವರಲಕ್ಷ್ಮೀ, ಮಹಾದೇವಿ, ಜಂಬಲಮ್ಮ, ಸರೋಜಾ, ಭೀಮಮ್ಮ ಇದ್ದರು.

ರೈತರಿಂದ ಮನವಿ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಜ್ಜೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ, ಶೇಂಗಾ, ಹೆಸರು, ತೊಗರಿ ಬೆಳೆಗಳು ಹಾಳಾಗಿವೆ. ಕಳೆದ ವರ್ಷ ಕೃಷ್ಣಾನದಿ ಪ್ರವಾಹದಿಂದ ಮುಳಗಡೆಯಾಗಿರುವ ಗುರ್ಜಾಪುರ, ಡಿ.ರಾಂಪುರು, ಅರಷಿಣಗಿ ಗ್ರಾಮಗಳ ಕೆಲವು ರೈತರಿಗೆ ಇದುವರೆಗೆ ಪರಿಹಾರ ದೊರಕಿಲ್ಲ. ಕೂಡಲೇ ಪರಿಹಾರ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿ ಆಗ್ರಹಿಸಿದರು.

2017-18ನೇ ಸಾಲಿನ ಬೆಳೆ ವಿಮೆ ಹಣವೂ ರೈತರಿಗೆ ನೀಡಿಲ್ಲ. 2019-20ನೇ ಸಾಲಿನ ಬೆಳೆವಿಮೆ ಪರಿಹಾರವನ್ನು ಎಲ್ಲ ರೈತರಿಗೆ ಖಾತೆಗಳಿಗೆ ಜಮಾ ಮಾಡಬೇಕು, ಪಂಪ್‍ಸೆಟ್‍ಗಳಿಗೆ ನಿರಂತರವಾಗಿ 12 ತಾಸು ವಿದ್ಯುತ್ ಪೂರೈಕೆ ಮಾಡಬೇಕು. ಕೃಷಿ ಇಲಾಖೆಯಲ್ಲಿ ಯಂತ್ರೋಪಕರಣಗಳು ಹಾಗೂ ಕೀಟನಾಶಕಗಳು
ಸರಿಯಾಗಿ ದೊರಕುತ್ತಿಲ್ಲ. ಕೂಡಲೇ ಎಲ್ಲ ರೈತರಿಗೆ ದೊರಕುವ ವ್ಯವಸ್ಥೆ ಮಾಡಬೇಕು. ತೋಟಗಾರಿಕೆ ಇಲಾಖೆ ಯವರು ಜಿಪಿಎಸ್‍ನಲ್ಲಿ ನೋಂದಾಯಿಸಿ ಬೆಳೆ ಹಾಕಿದ ರೈತರನ್ನು ಜಿಪಿಎಸ್‍ನಲ್ಲಿ ನೊಂದಣಿ ಮಾಡದೇ ವಂಚಿಸಲಾಗಿದೆ. ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣ ಗೌಡ ಕಡಗಂದೊಡ್ಡಿ, ಶಿವನಗೌಡ, ಕೆ.ವೀರೇಶಗೌಡ ಕಡಗಂದೊಡ್ಡಿ, ಜಿ.ಹುಲಿಗೆಪ್ಪ, ದೇವರಾಜ ನಾಯಕ, ಶ್ರೀಧರ ಜೆ.ಮಲ್ಲಾಪುರ, ರಮೇಶ ಗಾಣಧಾಳ, ತಿಮ್ಮಪ್ಪ ಬಾಪೂರ, ಇಬ್ರಾಹಿಂ, ಚನ್ನರೆಡ್ಡಿ, ಚಂದಾಸಾಬ್, ಖಾಸಿಂ ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.