ದೇವದುರ್ಗ: ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹೀರಾಲಾಲ ವಿರುದ್ಧ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ.
ಹೀರಾಲಾಲ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬೆನಕನಹಳ್ಳಿಯ ವಿದ್ಯಾನಂದ ಮಹಾಭೋದಾಲಯ ಮಠದ ಶ್ರೀಗಳ ಪುಣ್ಯಸ್ಮರಣೆ ಮತ್ತು ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಇಲಾಖೆಯ ವಾಹನದಲ್ಲಿ ಕುಟುಂಬ ಸಮೇತರಾಗಿ ತೆರಳಿ ಭಾಗವಹಿಸಿದ್ದಾರೆ.
ಚಾಲಕ ಇಲ್ಲದೆ ಸ್ವತಃ ಗಾಡಿಯನ್ನು ಎಇಇ ಅವರ ಮಗನೇ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಅದೇ ಕಾರ್ಯಕ್ರಮದಲ್ಲಿದ್ದ ದೇವದುರ್ಗ ಪಟ್ಟಣದ ಆಂಜನೇಯ ಮತ್ತು ಬಸವರಾಜ ಅವರು ಸರ್ಕಾರಿ ವಾಹನ ಗುರುತಿಸಿದ್ದಾರೆ. ಎಇಇ ಮತ್ತು ಕುಟುಂಬ ಸದಸ್ಯರು ವಾಹನದಲ್ಲಿ ಬಂದಿರುವುದನ್ನು ನೋಡಿ ವಾಹನದ ಫೋಟೊ ತೆಗೆದು ಮತ್ತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.
ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಬಗ್ಗೆ ಎಇಇ ಹೀರಾಲಾಲ ಅವರನ್ನು ಸಂಪರ್ಕಿಸಿದಾಗ ನಾನು ವಿ.ಸಿಯಲ್ಲಿ ಭಾಗವಹಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ. ನಂತರ ‘ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗೆ ಮಾಡಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಯಚೂರು ವಿಭಾಗದ ಇಇ ನಾಗೇಶ ಸರ್ಕಾರಿ ವಾಹನ ದುರ್ಬಳಕೆ ತಪ್ಪು. ಎಇಇ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಇಇ ಪ್ರತಿನಿತ್ಯ ಇಲಾಖೆ ವಾಹನದಲ್ಲಿ ರಾಯಚೂರಿಗೆ ಬರುತ್ತಾರೆ. ಬುಧವಾರ ಕಚೇರಿಗೂ ಬಾರದೆ ನೇರವಾಗಿ ತೆರಳಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
Quote - ವಾಹನ ದುರ್ಬಳಕೆ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆ. ಕರ್ತವ್ಯ ಲೋಪ ಎಸಗಿದ ಎಇಇ ಅವರನ್ನು ಅಮಾನತು ಮಾಡಲಿ ಆಂಜನೇಯ ದೇವದುರ್ಗ
Quote - ಸರ್ಕಾರಿ ವಾಹನವನ್ನು ಸರ್ಕಾರಿ ಕೆಲಸಗಳಿಗೆ ಮಾತ್ರ ಬಳಕೆ ಮಾಡಬೇಕು. ಅವರ ಸ್ವಂತಃಕ್ಕೆ ಬಳಸಿಕೊಂಡಿರುವುದು ಗಮನಕ್ಕಿಲ್ಲ. ವರದಿ ಪಡೆದು ಕ್ರಮ ಕೈಗೊಳ್ಳುವೆ ನಾಗೇಶ ಇಇ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.