ADVERTISEMENT

ವೇತನ ಹೆಚ್ಚಳ ಮಾಡದಿರುವುದಕ್ಕೆ ಅಕ್ಷರ ದಾಸೋಹ ಬಿಸಿಯೂಟ ನೌಕರರ ಖಂಡನೆ

ಪ್ರಧಾನಮಂತ್ರಿ ಭಾವಚಿತ್ರ ದಹನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 12:50 IST
Last Updated 2 ಫೆಬ್ರುವರಿ 2019, 12:50 IST
ರಾಯಚೂರಿನಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರ ದಹನ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರ ದಹನ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಬಿಸಿಯೂಟ ನೌಕರರ ವೇತನದಲ್ಲಿ ಹೆಚ್ಚಳ ಮಾಡದಿರುವುದನ್ನು ಖಂಡಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ತಾಲ್ಲೂಕ ಸಮಿತಿಯ ನೇತೃತ್ವದಲ್ಲಿ ನೌಕರರು ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ನರೇಂದ್ರ ಮೋದಿ ಭಾವಚಿತ್ರವನ್ನು ದಹಿಸಿ ಪ್ರತಿಭಟನೆ ನಡೆಸಿದರು.

ಮಕ್ಕಳ ಶಿಕ್ಷಣದ ಏಳಿಗೆಗೆ ಶ್ರಮಿಸುತ್ತಿರುವ ಬಿಸಿಯೂಟ ನೌಕರರು, ಅತಿ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ನೀಡುತ್ತಿರುವ ವೇತನ ಯಾವುದಕ್ಕೂ ಸಾಕಾಗುವುದಿಲ್ಲ. ಮಹತ್ತರ ಕಾರ್ಯ ಮಾಡುತ್ತಿರುವ ನೌಕರರನ್ನು ಕೇಂದ್ರ ಸರ್ಕಾರ ಮೊದಲಿನಿಂದಲೂ ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.

ಅಗತ್ಯ ವಸ್ತುಗಳ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ 10 ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ಒಂದು ನಯಾ ಪೈಸೆ ವೇತನವೂ ಹೆಚ್ಚಳ ಮಾಡಿಲ್ಲ. ಅನುದಾನ ಕೊರತೆ ಎನ್ನಲಾಗುತ್ತದೆ. ಆದರೆ, ಈ ಬಜೆಟ್‌ನಲ್ಲಿ ಅನುದಾನವನ್ನು ಪ್ರಸ್ತಾಪ ಮಾಡಿಲ್ಲ ಎಂದು ದೂರಿದರು.

ADVERTISEMENT

ಬಿಸಿಯೂಟ ಯೋಜನೆ ಬಲಪಡಿಸಬೇಕಾದ ಸರ್ಕಾರ ಯೋಜನೆಯನ್ನು ಖಾಸಗಿಯವರಿಗೆ ವಹಿಸಲು ಆಸಕ್ತಿ ತೋರುತ್ತಿದೆ. ಶೇ 40 ರಷ್ಟು ಬಜೆಟ್‌ ಕಡಿತ ಮಾಡಿರುವ ಸರ್ಕಾರ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ಸ್ಥಾಪಿಸಲು ಸುತ್ತೋಲೆ ಹೊರಡಿಸಿದೆ. ಇದರಿಂದ ಅಲ್ಪಸ್ವಲ್ಪ ವೇತನದಲ್ಲಿ ದುಡಿಯುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ. ಈ ಸುತ್ತೋಲೆ ಹಿಂದಕ್ಕೆ ಪಡೆಯಲು ಹಾಗೂ ವೇತನ ಹೆಚ್ಚಳ ಮಾಡಲು ಹಲವು ಮನವಿ ನೀಡಿದರೂ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊನೆಯ ಬಜೆಟ್‌ನಲ್ಲಾದರೂ ವೇತನ ಹೆಚ್ಚಳದ ನಿರೀಕ್ಷೆಯಿತ್ತು. ಆದರೆ, ಬಜೆಟ್‌ನಲ್ಲಿ ವೇತನ ಹೆಚ್ಚಳದ ಯಾವುದೇ ಪ್ರಸ್ತಾಪ ಮಾಡದೇ ಯೋಜನೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲು ಮುಂದಾದಂತೆ ಕಂಡುಬರುತ್ತಿದೆ. ಬಂಡವಾಳದಾರರ ಪರವಾಗಿ ಬಜೆಟ್‌ ಮಂಡಿಸಲಾಗಿದ್ದು, ಹಣಕಾಸು ಇಲಾಖೆಯ ಹಂಗಾಮಿ ಸಚಿವ ಸುಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ ಎಂದರು.

ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಡಿ.ಎಸ್.ಶರಣಬಸವ, ಅಧ್ಯಕ್ಷೆ ಅಕ್ಕ ಮಹಾದೇವಿ, ಕಾರ್ಯದರ್ಶಿ ನಾಗಮ್ಮ, ಖಜಾಂಚಿ ಕಲ್ಯಾಣಮ್ಮ, ಕೆ.ಜಿ.ವೀರೇಶ, ಈಶ್ವರಮ್ಮ, ಉಮಾ, ಶಕುಂತಲಾ, ರೇಣುಕಾ, ರಜಿಯಾ, ಈರಮ್ಮ, ಲಕ್ಷ್ಮೀ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.