ADVERTISEMENT

ಗುಲಬರ್ಗಾ ವಿವಿ: ಮೂರು ಪರೀಕ್ಷಾ ಕೇಂದ್ರಗಳು ರದ್ದು

​ಪ್ರಜಾವಾಣಿ ವಾರ್ತೆ
Published 13 ಮೇ 2019, 12:35 IST
Last Updated 13 ಮೇ 2019, 12:35 IST
ಡಾ.ಎಸ್‌.ಆರ್‌. ನಿರಂಜನ
ಡಾ.ಎಸ್‌.ಆರ್‌. ನಿರಂಜನ   

ರಾಯಚೂರು: ಗುಲಬರ್ಗಾ ವಿಶ್ವವಿದ್ಯಾಲಯಲಕ್ಕೆ ಒಳಪಡುವ ನಗರದ ಮೂರು ಕಾಲೇಜುಗಳ ಪರೀಕ್ಷಾ ಕೇಂದ್ರಗಳನ್ನು ಸೋಮವಾರ ರದ್ದುಪಡಿಸಲಾಗಿದ್ದು, ಅಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳನ್ನು ಬೇರೆ ಪರೀಕ್ಷಾ ಕೇಂದ್ರಗಳಿಗೆ ವರ್ಗಾವಣೆ ಮಾಡಲಾಗಿದೆ.

ವಿವೇಕಾನಂದ ಬಿಸಿಎ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ರದ್ದುಪಡಿಸಿ ಈ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಡಿ.ಕೆ. ಭಂಡಾರಿ ಪದವಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಿ ಈ ಪರೀಕ್ಷಾ ಕೇಂದ್ರವನ್ನು ಎಎಂಇ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಮತ್ತು ಜ್ಞಾನಗಂಗಾ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಿ ಈ ಪರೀಕ್ಷಾ ಕೇಂದ್ರವನ್ನು ಬಿಆರ್‌ಬಿ ಕಾಲೇಜಿನ ಪರೀಕ್ಷಾ ಕೆಂದ್ರಕ್ಕೆ ವರ್ಗಾಯಿಸಲಾಗಿದೆ.

ಕುಲಪತಿ ಭೇಟಿ

ADVERTISEMENT

ನಗರದಲ್ಲಿ ಪರೀಕ್ಷಾ ಅಕ್ರಮಕ್ಕೆ ಅವಕಾಶ ನೀಡಿದ ಕೇಂದ್ರಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಆರ್‌. ನಿರಂಜನ್‌ ನೇತೃತ್ವದ ನಾಲ್ಕು ಸದಸ್ಯರ ತನಿಖಾ ತಂಡವು ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು ಎಂದರು.

ಕ್ಲಸ್ಟರ್ ಪದ್ಧತಿ ಜಾರಿಗೊಳಿಸಿದ ವಿಶ್ವವಿದ್ಯಾಲಯ ಸರ್ಕಾರದ ಮೆಚ್ಚುಗೆ ಪಡೆದಿತ್ತು. ಪರೀಕ್ಷೆಯಲ್ಲಿ ಸುಧಾರಣೆ ಮಾಡಲು 215ರಿಂದ 140ಕ್ಕೆ ಪರೀಕ್ಷಾ ಕೇಂದ್ರಗಳನ್ನು ಇಳಿಕೆ ಮಾಡಲಾಗಿದೆ. ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಪರೀಕ್ಷೆಯ ಅಕ್ರಮ ಎಸಗುವ ಮೂಲಕ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ನಿಗದಿ ಪಡಿಸಿದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಿ ಉತ್ತರ ಪತ್ರಿಕೆಗಳನ್ನು ಕಳಿಸಬೇಕಾದ ಕಾಲೇಜಿನವರು ತಪ್ಪು ಎಸಗಿರುವ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ. ಏಕಾಏಕಿ ಕ್ರಮ ಜರುಗಿಸಿದರೆ ವಿದ್ಯಾರ್ಥಿಗಳಿಗೂ ತೊಂದರೆಯಾಗಲಿದೆ ಎಂದರು.

ಚುನಾವಣೆಯ ಹಿನ್ನೆಲೆಯಲ್ಲಿ ಕೆಲ ಕಾಲೇಜುಗಳನ್ನು ಚುನಾವಣೆ ಆಯೋಗದ ಸುಪರ್ದಿಗೆ ನೀಡಬೇಕಾಯಿತು. ಇದರಿಂದ ಪರೀಕ್ಷೆಗೆ ಅಡಚಣೆಯಾಗಿದೆ. ಆದ್ದರಿಂದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳನ್ನು ಮಾಡಿರುವುದರಿಂದ ಈ ಅಚಾತುರ್ಯ ಘಟನೆ ನಡೆದಿದೆ. ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಿ ಪರ್ಯಾಯ ವ್ಯವಸ್ಥೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ಕುಲಸಚಿವ ಡಾ.ಸೋಮಶೇಖರ್‌, ಡಾ.ಸಿದ್ದಪ್ಪ ಕೆ., ಪ್ರೊ. ವಿದ್ಯಾಸಾಗರ, ಮೌಲ್ಯಮಾಪನ ಕುಲಸಚಿವ ಡಿ.ಎಂ.ಮದರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಣೇಶ ಕುಲಕರ್ಣಿ, ಎಲ್‌ವಿಡಿ ಕಾಲೇಜಿನ ಶೀಲಾದಾಸ ಇದ್ದರು ಇದ್ದರು.

ನ್ಯಾಯಾಂಗ ಬಂಧನಕ್ಕೆ

ಚೇತನ ಕಾಲೇಜಿನ ವಿದ್ಯಾರ್ಥಿಗಳು ಎಸಗಿರುವ ಪರೀಕ್ಷೆ ಅಕ್ರಮದ ಪ್ರಕರಣದಲ್ಲಿ ಕಾಲೇಜಿನ ಮುಖ್ಯಸ್ಥ ಪವನ ಹಾಗೂ ಸಹಾಯಕ ನಿರಂಜನ ಅವರನ್ನು ಒಂದನೇ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಿರಂಜನ ವಿದ್ಯಾರ್ಥಿಯಾಗಿದ್ದು, ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಆದ್ದರಿಂದ ನಿರಂಜನ ಹೊರತು ಪಡಿಸಿ 38 ವಿದ್ಯಾರ್ಥಿಗಳಿಗೆ ಜಾಮೀನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.