ರಾಯಚೂರು: ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕವು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ 3,400 ಕ್ವಿಂಟಲ್ ತಳಿವರ್ಧಕ ಹಾಗೂ ಗುಣಮಟ್ಟದ ಬೀಜ ಉತ್ಪಾದನೆ ಮಾಡಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ರೈತರಿಗೆ ವಿತರಿಸಲು ಆರಂಭಿಸಿದೆ.
ಗುಣಮಟ್ಟದ ತೊಗರಿ, ಸೋಯಾ, ನವಣೆ, ಕಡಲೆ ಬೀಜ ಖರೀದಿಸಲು ಕಲಬುರಗಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳ ರೈತರು ತಂಡಗಳಲ್ಲಿ ಬಂದು ಬೀಜ ಖರೀದಿಸಲು ಆರಂಭಿಸಿದ್ದಾರೆ.
ವಿಶ್ವವಿದ್ಯಾಲಯವೇ 170 ನೋಂದಾಯಿತ ರೈತರ ಹೊಲಗಳಲ್ಲಿ ಪ್ರಮಾಣಿತ ಬೀಜಗಳ ಉತ್ಪಾದನೆ ಮಾಡಿ ರೈತರಿಂದ ಖರೀದಿಸಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಕೃಷಿ ಸಂಶೋಧನಾ ಕೇಂದ್ರ (ಎಆರ್‌ಎಸ್) ಹಾಗೂ ಕೃಷಿ ಶಿಕ್ಷಣ ವಿಸ್ತರಣಾ ಕೇಂದ್ರದಲ್ಲಿ (ಎಇಇಸಿ) ಬೀಜ ವಿತರಣಾ ಕೇಂದ್ರಗಳನ್ನು ತೆರೆದು ವಿತರಿಸುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಡಲು ಪ್ರತಿ ಜಿಲ್ಲೆಗೆ ಒಬ್ಬರು ಸಂಯೋಜಕರನ್ನೂ ನೇಮಕ ಮಾಡಿದೆ.
ಒಂದು ಎಕರೆಗೆ ಒಂದು ಕೆ.ಜಿಯ ಒಂದು ಪ್ಯಾಕೆಟ್ ಬೀಜ ಕೊಡಲಾಗುತ್ತಿದೆ. ಮುಂಗಾರು ಹಂಗಾಮು ಆರಂಭವಾಗುವ ಮೊದಲೇ ರೈತರು ಬೀಜ ಖರೀದಿಸಿಟ್ಟುಕೊಂಡು ಬಿತ್ತನೆಗೆ ಸಿದ್ಧತೆಯನ್ನೂ ಆರಂಭಿಸಿದ್ದಾರೆ. ಕೃಷಿ ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲೇ ಬೀಜ ಉತ್ಪಾದನೆಯಾಗುತ್ತಿರುವ ಕಾರಣ ಗುಣಮಟ್ಟದ ಬೀಜದ ಬಗ್ಗೆ ರೈತರಲ್ಲಿ ವಿಶ್ವಾಸರ್ಹತೆ ಹೆಚ್ಚಿದೆ.
‘ಕೃಷಿ ವಿಶ್ವವಿದ್ಯಾಲಯದಿಂದ 10 ವರ್ಷಗಳಿಂದ ಬೀಜ ಒಯ್ಯುತ್ತಿರುವೆ. ಕಳೆದ ವರ್ಷ 110 ಎಕರೆ ಪ್ರದೇಶದಲ್ಲಿ 542 ಕ್ವಿಂಟಲ್ ತೊಗರಿ ಬಂದಿದೆ. ಈ ವರ್ಷ ಆರು ಕ್ವಿಂಟಲ್ ಬೀಜ ಖರೀದಿಸಿರುವೆ‘ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾದ ರೈತ ದೊಡ್ಡನಗೌಡ ಸರನಗೌಡ ಹೇಳಿದರು.
‘ವಿಶ್ವವಿದ್ಯಾಲಯದ ಮೇಲೆ ವಿಶ್ವಾಸವಿಟ್ಟು ಕಳೆದ ವರ್ಷ ಬೀಜ ಖರೀದಿಸಿದ್ದೆ. ಮೂರು ಎಕರೆಯಲ್ಲಿ 16 ಪ್ಯಾಕೆಟ್ ತೊಗರಿ ಬಂದಿದೆ. ₹1.13 ಲಕ್ಷ ಆದಾಯ ಬಂದಿದೆ. ಈ ವರ್ಷವೂ ತೊಗರಿ ಬೀಜ ಖರೀದಿ ಮಾಡಿರುವೆ’ ಎಂದು ಲಿಂಗಸುಗೂರು ತಾಲ್ಲೂಕಿನ ಮುದಗಲ್‌ನ ಮೌಲಾಸಾಬ ತಿಳಿಸಿದರು.
‘ವಿಶ್ವವಿದ್ಯಾಲಯವು ನೋಂದಾಯಿತ ರೈತರ ಹೊಲದಲ್ಲಿ ಪ್ರಮಾಣಿತ ಬೀಜ ಬೆಳೆಯುತ್ತಿದೆ. ತೊಗರಿ, ಸೋಯಾ, ನವಣೆ ಹಾಗೂ ಕಡಲೆಗೆ ಬೇಡಿಕೆ ಇದೆ. ವಿಶ್ವವಿದ್ಯಾಲಯದ ವೀಕ್ಷಣಾ ತಂಡವು ಬಿತ್ತನೆ ಸಂದರ್ಭ, ಬೆಳೆಯುವ, ಹೂವು ಬಿಡುವ, ಕಾಳು ಕಟ್ಟುವ ಹಾಗೂ ಕಟಾವು ಸಂದರ್ಭದಲ್ಲಿ ವಿಜ್ಞಾನಿಗಳ ವೀಕ್ಷಣಾ ತಂಡ ಭೇಟಿ ನೀಡಿ ಪರಿಶೀಲಿಸುತ್ತದೆ‘ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ವಿಶೇಷ ಅಧಿಕಾರಿ ಅರುಣಕುಮಾರ ಹೊಸಮನಿ ಹೇಳಿದರು.
‘ವೀಕ್ಷಣಾ ತಂಡದಲ್ಲಿ ರಾಜ್ಯ ಬೀಜ ನಿಗಮ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ, ರಾಷ್ಟ್ರೀಯ ಬೀಜ ನಿಗಮ, ಕೃಷಿ ಇಲಾಖೆ, ಕರ್ನಾಟಕ ಸಹಕಾರ ಎಣ್ಣೆಬೀಜಗಳ ಬೆಳೆಗಾರರ ಒಕ್ಕೂಟದ ಸದಸ್ಯರೂ ಇದ್ದಾರೆ. ನಾಲ್ಕು ಹಂತಗಳಲ್ಲಿ ಪರಿಶೀಲನೆ ನಡೆದ ನಂತರವೇ ವಿಶ್ವವಿದ್ಯಾಲಯದ ಬ್ರ್ಯಾಂಡ್‌ನ ಅಡಿಯಲ್ಲೇ ಗುಣಮಟ್ಟದ ಬೀಜ ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
‘ಒಣ ಬೇಸಾಯಕ್ಕೆ ಸೂಕ್ತವಾದ ತಳಿಗಳನ್ನು ವಿಶ್ವವಿದ್ಯಾಲಯವೇ ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿದೆ. ಟಿಎಸ್–3ಆರ್ ತೊಗರಿಗೆ ಹೆಚ್ಚಿನ ಬೇಡಿಕೆ ಇದೆ. ಮೊದಲು ಬಂದವರಿಗೆ ಆದ್ಯತೆ ಮೇಲೆ ಬೀಜ ಕೊಡುತ್ತಿದ್ದೇವೆ. ಕೃಷಿ ವಿಶ್ವವಿದ್ಯಾಲಯದ ಬೀಜೋತ್ಪಾದನೆ ಕಾರ್ಯಕ್ರಮ ಪರಿಗಣಿಸಿ ಐಸಿಎಆರ್– ಭಾರತೀಯ ಬೀಜ ವಿಜ್ಞಾನ ಸಂಸ್ಥೆಯು 2017–2018ರಲ್ಲಿ ಅತ್ಯುತ್ತಮ ಬೀಜೋತ್ಪಾದನಾ ಕೇಂದ್ರದ ಪ್ರಶಸ್ತಿಯನ್ನೂ ಪ್ರದಾನ ಮಾಡಿದೆ’ ಎಂದು ಖುಷಿ ಹಂಚಿಕೊಂಡರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕದ ಭಾಗವನ್ನು ಅತ್ಯುತ್ತಮ ಗುಣಮಟ್ಟದ ಬೀಜೋತ್ಪಾದನೆ ವಲಯವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.– ಅರುಣಕುಮಾರ ಹೊಸಮನಿ, ಬೀಜ ಘಟಕದ ವಿಶೇಷ ಅಧಿಕಾರಿ
ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಬೀಜ
* ತೊಗರಿ–ಟಿಎಸ್–3ಆರ್
* ತೊಗರಿ–ಜೆಆರ್‌ಜಿ811
* ತೊಗರಿ– ಜೆಆರ್‌ಜಿ152
* ನವಣೆ–ಎಚ್‌ಎನ್–46
* ಸೋಯಾ ಅವರೆ–ಡಿಎಸ್‌ಬಿ21
* ಮೇವಿನ ಬೀಜ–ಸಿಒಎಸ್‌ಎಫ್–31
* ಸೆಣಬು–ಲೋಕಲ್
* ಹೈಬ್ರಿಡ್ ಸೂರ್ಯಕಾಂತಿ– ಆರ್‌ಎಸ್‌ಎಫ್‌ಎಚ್700
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.