ಅಮಾನತು
ರಾಯಚೂರು: ಮಾನ್ವಿಯಲ್ಲಿ ಕಲ್ಲು ಅಕ್ರಮ ಗಣಿಗಾರಿಕೆ ಹಾಗೂ ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪುಷ್ಪಲತಾ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ನಿತೀಶ್ ಶಿಫಾರಸು ಮಾಡಿದ್ದಾರೆ.
ಮಾನ್ವಿ ಪಟ್ಟಣದ ಹೊರವಲಯದಲ್ಲಿ ಹಿಂದೂಸ್ತಾನ್ ಸ್ಟೋನ್ ಕ್ರಷರ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಅಕ್ಬರ್ ಪಾಷಾ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ದೂರು ದಾಖಲಾಗಿದ್ದರೂ ಅಧಿಕಾರಿ ಪುಷ್ಪಲತಾ ಅವರು ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ಸಾಥ್ ನೀಡಿದ್ದಾರೆ ಎಂದು ಗಂಭೀರ ಆರೋಪಗಳು ಬಂದಿವೆ ಎಂದು ಉಲ್ಲೇಖಿಸಿದ್ದಾರೆ.
8 ಎಕರೆ ಪರವಾನಗಿ ಪಡೆದು 40 ಎಕರೆಯಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದ್ದರೂ ಸುಳ್ಳು ಲೆಕ್ಕ ತೋರಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಪ್ರಯತ್ನಗಳು ನಡೆದಿವೆ. ಅಕ್ರಮ ತಡೆಗಟ್ಟುವಲ್ಲಿ ಅಧಿಕಾರಿ ವಿಫಲವಾಗಿದ್ದಾರೆ. ಹಿರಿಯ ವಿಜ್ಞಾನಿ ಪುಷ್ಪಲತಾ ಅವರಿಗೆ ಮಾರ್ಚ್ 25ರಂದು ಕಾರಣ ಕೇಳಿ ನೋಟಿಸ್ ಕೊಡಲಾಗಿದೆ. ಅವರಿಂದ ಸಮಪರ್ಕ ಉತ್ತರ ಬಂದಿಲ್ಲ ಎಂದು ಹೇಳಿದ್ದಾರೆ.
ಮರಳು ಅಕ್ರಮ ತಡೆಗೆ ನಡೆಯುವ ಕಾರ್ಯಾಚರಣೆಗೆ ಪುಷ್ಪಲತಾ ಸಹಕಾರ ನೀಡುತ್ತಿಲ್ಲವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಚ್ 26ರಂದು ನೀಡಿದ ಪತ್ರವನ್ನು ಉಲ್ಲೇಖಿಸಿ ವರದಿ ಕೊಟ್ಟಿದ್ದಾರೆ.
ಜಿಲ್ಲಾಡಳಿತ ಮರಳು ಅಕ್ರಮ ಸಾಗಣೆ ತಡೆಯಲು ಕಾರ್ಯಪಡೆ ಸಮಿತಿ ರಚಿಸಿದರೂ ಇಲಾಖೆಯ ಅಧಿಕಾರಿಗಳು ಚೆಕ್‌ಪೋಸ್ಟ್‌ಗಳಿಗೆ ಬರುತ್ತಿಲ್ಲ. ಕೇವಲ ಪೊಲೀಸರೇ ಕಾರ್ಯನಿರ್ವಹಿಸುವಂತಾಗಿದೆ. ಇದರಿಂದ ಪೊಲೀಸ್ ಇಲಾಖೆಯ ಕಾರ್ಯಕ್ಕೂ ತೊಡಕಾಗುತ್ತಿದೆ.
ಏನಾದರೂ ವಿಚಾರಿಸಿದರೆ ಸಿಬ್ಬಂದಿ ಕೊರತೆ ಇದೆ ಎನ್ನುವ ಹಾರಿಕೆಯ ಉತ್ತರ ಕೊಡುತ್ತಾರೆ. ಮರಳು ಅಕ್ರಮ ಸಂಗ್ರಹ, ಸಾಗಣೆ ವಾಹನಗಳ ಮೇಲೆ ದಾಳಿ ಮಾಡಲು ಸಹ ಸಹಕಾರ ನೀಡುವುದಿಲ್ಲ. ಹೀಗಾಗಿ ಅವರನ್ನು ಅಮಾನತು ಮಾಡಬೇಕು ಎಂದು ತಿಳಿಸಿದ್ದಾರೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಏಪ್ರಿಲ್ 16ರಂದು ಪತ್ರದ ಪ್ರತಿಯನ್ನು ಕಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.