ADVERTISEMENT

ರೋಗ ಕಾಣಿಸಿಕೊಂಡ ಜಾನುವಾರು ನಿರ್ಲಕ್ಷಿಸಬೇಡಿ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪ್ರಾಣಿಶಾಸ್ತ್ರ ವಿಜ್ಞಾನಿ ಡಾ.ಪ್ರಹ್ಲಾದ್‌ ಉಭಾಳೆ ಸಲಹೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 6:00 IST
Last Updated 30 ನವೆಂಬರ್ 2022, 6:00 IST
ಡಾ.ಪ್ರಹ್ಲಾದ್‌ ಉಭಾಳೆ
ಡಾ.ಪ್ರಹ್ಲಾದ್‌ ಉಭಾಳೆ   

ರಾಯಚೂರು: ನಗರದಲ್ಲಿ ಮಂಳವಾರ ಆಯೋಜಿಸಿದ್ದ ‘ಪ್ರಜಾವಾಣಿ’ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಪ್ರಾಣಿಶಾಸ್ತ್ರ ವಿಜ್ಞಾನಿ ಡಾ.ಪ್ರಹ್ಲಾದ್‌ ಉಭಾಳೆ ಅವರು ಸಾಕುಪ್ರಾಣಿಗಳಿಗೆ ಅಂಟಿದ ರೋಗಗಳಿಗೆ ಪರಿಹಾರ ಮತ್ತು ಸದ್ಯ ರಾಸುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ರೈತರಿಗೆ ಹೇಳಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಕರೆ ಮಾಡಿದ್ದ ರೈತರಿಗೆ ಸಮಾಧಾನವಾಗಿ ಮನವರಿಕೆ ಮಾಡಿದರು.

l ಹಸುವಿಗೆ ಚರ್ಮಗಂಟು ರೋಗ ಬಂದು ಮೃತಪಟ್ಟಿದ್ದು, ಇದುವರೆಗೂ ಪರಿಹಾರ ಬಂದಿಲ್ಲ.

– ಸಾಮಾನ್ಯವಾಗಿ ಚರ್ಮಗಂಟು ರೋಗದಿಂದ ಮರಣ ಹೊಂದಿದ ಹಸುಗಳ ಪಂಚನಾಮೆಯನ್ನು ಪಶುವೈದ್ಯರು ಮಾಡುತ್ತಾರೆ. ವರದಿ ಕೊಟ್ಟ ನಂತರ ಕೆಲವು ನಿಯಮಗಳನ್ನು ಅನುಸರಿಸಿದ ಬಳಿಕ ಪರಿಹಾರ ವಿತರಿಸುವ ವ್ಯವಸ್ಥೆ ಇದೆ.

ADVERTISEMENT

l ಚರ್ಮಗಂಟು ರೋಗ ಹರಡದಂತೆ ಏನು ಮಾಡಬೇಕು?

– ಚರ್ಮಗಂಟು ರೋಗ ಲಕ್ಷಣಗಳು ಕಾಣಿಸಿದ ಹಸುವಿನಿಂದ ಇನ್ನುಳಿನ ಜಾನುವಾರುಗಳನ್ನು ಪ್ರತ್ಯೇಕಿಸಬೇಕು. ಇಡೀ ಗ್ರಾಮದ ಹಸುಗಳಿಗೆಲ್ಲ ಲಸಿಕೆ ನೀಡುವಂತೆ ಪಶುವೈದ್ಯರಿಗೆ ತಿಳಿಸಬೇಕು. ಇದು ಸಾಂಕ್ರಾಮಿಕ ರೋಗ ಆಗಿರುವುದರಿಂದ ಸುತ್ತಮುತ್ತಲಿನ ಎಲ್ಲ ಹಸುಗಳಿಗೆ ಲಸಿಕೆ ಕೊಡಿಸುವುದು ಬಹಳ ಮುಖ್ಯ.

l 15 ದಿನಗಳ ಹಿಂದೆ ಲಸಿಕೆ ಹಾಕಿದರೂ ಹಸು ಮೃತಪಟ್ಟಿದೆ?

– ಲಸಿಕೆ ಎಂದರೆ ಬೇರೆ ಇಂಜೆಕ್ಷನ್‌ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಲಸಿಕೆ ಹಾಕಿದ ನಂತರ ಅದು ಕೆಲಸ ಮಾಡುವು
ದಕ್ಕೆ ಕನಿಷ್ಠ ಮೂರು ವಾರಗಳಾಗುತ್ತದೆ. ಲಸಿಕೆಯು ರೋಗನಿರೋಧಕ ಶಕ್ತಿ ಬೆಳೆಯಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿ ಬೆಳೆಯುವ ಮೊದಲೇ ಹಸು ಚರ್ಮಗಂಟು ರೋಗಕ್ಕೆ ತುತ್ತಾಗಿರಬಹುದು. ಈ ಕಾರಣದಿಂದ ರೈತರು ಲಸಿಕೆ ಹಾಕುವುದಕ್ಕೆ ಕಾಯುತ್ತಾ ಕೂಡಬಾರದು. ಬೇರೆ ಗ್ರಾಮದಲ್ಲಿ ಚರ್ಮಗಂಟು ರೋಗ ಬಂದಿದೆ ಎಂದು ನಿರ್ಲಕ್ಷ್ಯ ಮಾಡಬಾರದು. ಮುಂಜಾಗ್ರತೆ ಕ್ರಮವಾಗಿ ಲಸಿಕೆಯನ್ನು ಎಲ್ಲ ಹಸುಗಳಿಗೆ ಕೊಡಿಸಬೇಕು. ಚರ್ಮಗಂಟು ರೋಗವು ನೀರು, ಆಹಾರ, ಸೊಳ್ಳೆ, ಉಣ್ಣೆಗಳ ಮೂಲಕ ಹಾಗೂ ಇತರೆ ಸಂಪರ್ಕಗಳಿಂದ ಹರಡಿಕೊಳ್ಳುತ್ತಿದೆ. ಚರ್ಮಗಂಟು ರೋಗ ಇರುವ ಹಸುವನ್ನು ಸ್ಪರ್ಶಿಸಿದ ವ್ಯಕ್ತಿಯ ಮೂಲಕವೂ ಇನ್ನೊಂದು ಹಸುವಿಗೆ ರೋಗ ಬರುವ ಸಾಧ್ಯತೆ ಇರುತ್ತದೆ.

l ರಾಸುಗಳಿಗೆ ಚರ್ಮಗಂಟು ರೋಗದ ಲಕ್ಷಣಗಳು ಹೇಗಿರುತ್ತವೆ?

– ಅತಿಯಾದ ಜ್ವರ (105-108 °F ) I, ಕಣ್ಣುಗಳಿಂದ ನೀರು ಸೋರುವುದು, ನಿಶ್ಯಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು, ಜಾನುವಾರುಗಳ ಚರ್ಮದ ಮೇಲೆ 2-5 ಸೆ.ಮೀ.ನಷ್ಟು ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುವುದು ಮತ್ತು ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎತ್ತುಗಳು ಹೆಚ್ಚು ಬಳಲುವುದರಿಂದ ಕೆಲಸದ ಸಾಮರ್ಥ್ಯ ಕುಂಠಿತವಾಗುತ್ತದೆ. ಕರುಗಳು ತೀವ್ರವಾಗಿ ಬಳಲಿ ಸಾವಿಗೀಡಾಗಬಹುದು. ಮಿಶ್ರತಳಿ ಜರ್ಸಿ, ಎಚ್.ಎಫ್. ರಾಸುಗಳು ಹಾಗೂ ಕರುಗಳು ಈ ರೋಗದಿಂದ ಹೆಚ್ಚು ಬಳಲುತ್ತವೆ.

l ಚರ್ಮರೋಗಕ್ಕೆ ಚಿಕಿತ್ಸೆ ಹಾಗೂ ತಡೆಗಟ್ಟುವ ವಿಧಾನ?

– ಈ ರೋಗವು ವೈರಾಣು ರೋಗವಾಗಿರುವುದರಿಂದ ನಿರ್ದಿಷ್ಟ
ವಾದ ಚಿಕಿತ್ಸೆ ಇರುವುದಿಲ್ಲ. ಈ ರೋಗಕ್ಕೆ ಯಾವುದೇ ಲಸಿಕೆ ಲಭ್ಯವಿರುವುದಿಲ್ಲ. ಜಾನುವಾರಗಳಿಗೆ ರೋಗದ ಲಕ್ಷಣ
ಗಳಿಗೆ ತಕ್ಕಂತೆ ಚಿಕಿತ್ಸೆ ನೀಡ
ಬೇಕಾಗುತ್ತದೆ. ದೇಹ
ವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು. ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಷಿಯಂ ಪರಮ್ಯಾಂಗನೇಟ್ ದ್ರಾವಣದಿಂದ ತೊಳೆದು ಐಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು. ರೋಗ ಹರಡುವುದನ್ನು ತಡೆಯಲು ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸಬೇಕು. ರೋಗಗ್ರಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಬೇಕು. ಹಸಿರು ಮೇವು, ಪೌಷ್ಠಿಕ ಆಹಾರ ಹಾಗೂ ಲವಣ ಮಿಶ್ರಣ ಮಾಡಿ ನೀಡಬೇಕು. ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 5-6 ಬಾರಿ ಕುಡಿಸಬೇಕು. ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಈ ರೋಗವು ಸೊಳ್ಳೆ, ಉಣ್ಣೆ, ನೊಣ ಹಾಗೂ ಇತರೆ ಕೀಟಗಳಿಂದ ಮುಖ್ಯವಾಗಿ ಹರಡುವುದರಿಂದ ಕೊಟ್ಟಿಗೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಹಾಗೂ ಫಾರ್ಮಾಲಿನ್ (15) ಫಿನೈಲ್ (ಶೇ 2) ಅಥವಾ ಸೋಡಿಯಂ ಹೈಪೋಕ್ಲೋರೇಟ್ (ಶೇ 2) ದಿನಕ್ಕೆ 2 ಬಾರಿ ಸಿಂಪಡಿಸಬೇಕು. ರೋಗಗ್ರಸ್ಥ ಜಾನುವಾರು ಮರಣ ಹೊಂದಿದಲ್ಲಿ ಆಳವಾದ ಗುಂಡಿಯಲ್ಲಿ ಹೂಳಬೇಕು.

l ಚರ್ಮಗಂಟು ರೋಗ ಮಾರಣಾಂತಿಕವೇ?

– ಚರ್ಮಗಂಟು ರೋಗ ಮಾರಣಾಂತಿ
ಕವಲ್ಲ. ಶೇ 5 ರಿಂದ ಶೇ 10 ರಷ್ಟು ಮಾತ್ರ ಮರಣದ ಪ್ರಮಾಣವಿದೆ. ಆದರೆ, ಹರಡುವಿಕೆ ಪ್ರಮಾಣ ಶೇ 40 ರಷ್ಟಿದೆ. ಆದರೆ, ಅಲಕ್ಷ್ಯ ಮಾಡಿದರೆ ಸಾವಿನ ಪ್ರಮಾಣ ಹೆಚ್ಚಾಗುತ್ತದೆ.

l ಬೀದಿನಾಯಿಗಳಿಗೆ ಒಂದು ರೀತಿ ಕೆಮ್ಮುರೋಗ ಬಂದಿದೆ? ಏನು ಮಾಡುವುದು?

– ಬೀದಿನಾಯಿಗಳಿಗೆ ಚಳಿಗಾಲದಲ್ಲಿ ಶ್ವಾಸಕೋಶ ಸಂಬಂಧಿ ರೋಗಗಳು ಬರುತ್ತವೆ. ಪಶುವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ನೀಡಬೇಕು.

l ಚರ್ಮಗಂಟು ರೋಗ ಬಂದಿರುವ ಜಾನುವಾರುಗಳಿಗೆ ಲಸಿಕೆ ಕೊಡಬಹುದೆ?

– ಚರ್ಮಗಂಟು ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಲಸಿಕೆ ಬದಲಾಗಿ, ಚಿಕಿತ್ಸೆ ಕೊಡಬೇಕಾಗುತ್ತದೆ. ಒಂದು ವಾರಗಟ್ಟಲೇ ಚಿಕಿತ್ಸೆ ಕೊಡಬೇಕಾಗುತ್ತದೆ. ಅನಾರೋಗ್ಯ ಜಾನುವಾರುಗಳನ್ನು ಬೇರ್ಪಡಿಸಬೇಕು. ಆರೋಗ್ಯವಂತ ದನಕರುಗಳಿಗೆ ಲಸಿಕೆ ಹಾಕಬೇಕು.

l ಎಮ್ಮೆಗಳಿಗೆ ಚರ್ಮಗಂಟು ರೋಗ ಬರುವುದೇ?

– ಎಮ್ಮೆಗಳಿಗೂ ಚರ್ಮಗಂಟು ರೋಗ ಬರುತ್ತದೆ. ಆದರೆ, ಹಸುಗಳಲ್ಲಿ ಕಾಣಿಸುವಷ್ಟು ತೀವ್ರತೆ ಇರುವುದಿಲ್ಲ. ಲಕ್ಷಣಗಳನ್ನು ಆಧರಿಸಿ ಪಶುವೈದ್ಯರು ಚಿಕಿತ್ಸೆ ನೀಡುತ್ತಾರೆ.

l ಕುರಿಗಳಲ್ಲಿ ಕುಂಟುವ ಸಮಸ್ಯೆಗೆ ಪರಿಹಾರವೇನು?

– ನಿರಂತರವಾಗಿ ಮಳೆ ಸುರಿದ ಸಂದರ್ಭದಲ್ಲಿ ಅಥವಾ ಕುರಿಗಳನ್ನು ಮೇಯಿಸುವುದಕ್ಕೆ ಕರೆದುಕೊಂಡು ಹೋಗುವಾಗ ಕೆರೆ, ಹಳ್ಳದಲ್ಲಿ ಹಾಯ್ದು ಹೋಗುವುದರಿಂದ ಇಂಥ ಸಂದರ್ಭದಲ್ಲಿ ಕಾಲುಬುಡ ಕೊಳೆರೋಗ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಸೂಕ್ಷ್ಮಾಣುಜೀವಿಗಳಿಂದ ಬರುವ ರೋಗ. ಕಾಲು ಕುಂಟಿದರೂ ಅದನ್ನು ಎಲ್ಲ ಕುರಿಗಳೊಂದಿಗೆ ತೆಗೆದುಕೊಂಡು ಹೋಗುವುದರಿಂದ ದಿನದಿಂದ ದಿನಕ್ಕೆ ರೋಗ ಲಕ್ಷಣಗಳು ಹೆಚ್ಚಾಗಿ, ರೋಗದ ತೀವ್ರತೆ ವೃದ್ಧಿಸುತ್ತದೆ. ಕುಂಟುವ ಕುರಿಗಳನ್ನು ಕನಿಷ್ಠ ವಾರದ ಮಟ್ಟಿಗಾದರೂ ಕೊಟ್ಟಿಗೆಯಲ್ಲೇ ಆರೋಗ್ಯವಂತ ಕುರಿಗಳಿಂದ ಬೇರ್ಪಡಿಸಿ ಇಟ್ಟುಕೊಂಡು ಉಪಚರಿಸಬೇಕು. ಕಾಪರ್‌ಸಲ್ಫೈಟ್‌ ಅಥವಾ ಪೊಟ್ಯಾಷಿಯಂ ಫಾರ್ಮಾಗನೈಟ್‌ ನೀರಿನಲ್ಲಿ ಮಿಶ್ರಣ ಮಾಡಿ, ಪಶುವೈದ್ಯರ ಸಲಹೆಯಂತೆ ಕಾಲು ತೊಳೆಯಬೇಕು. ಇಮ್ಯಾಕ್ಸ್‌ ಆಯಿಂಟ್‌ಮೆಂಟ್‌ ಅಥವಾ ಬೇವಿನೆಣ್ಣೆ ಹಚ್ಚಿದರೆ ನೊಣಗಳ ಬಾಧೆ ತಪ್ಪಿಸಬಹುದು. ವೈದ್ಯರ ಸಲಹೆ ಪಡೆದು ಚಿಕಿತ್ಸೆ ಕೊಡಬೇಕು.

ಲಸಿಕೆ ಮುನ್ನ ಜಂತು ನಾಶಕ ಬಳಸಿ: ಯಾವುದೇ ಜಾನುವಾರುಗಳಿಗೆ ಲಸಿಕೆ ಕೊಡುವಾಗ ಜಂತುಗಳ ಬಾಧೆ ಇರಬಾರದು. ಜಂತುಗಳಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇಂಥ ಜಾನುವಾರುಗಳಿಗೆ ಲಸಿಕೆ ಕೊಟ್ಟರೆ ಉಪಯೋಗಕ್ಕೆ ಬರುವುದು ಕಡಿಮೆ. ಯಾವುದೇ ಲಸಿಕೆ ಹಾಕುವ ಎರಡು ವಾರಗಳ ಮೊದಲು ಜಂತುನಾಶಕ ಔಷಧವನ್ನು ಬಳಸುವುದರಿಂದ ಒಳ್ಳೆಯ ರೋಗನಿರೋಧಕ ಶಕ್ತಿ ಪಡೆಯಬಹುದಾಗಿದೆ. ಕರುಗಳಲ್ಲಿ ಹೆಚ್ಚು ಜಂತುಬಾಧೆ ಸಾಮಾನ್ಯವಾಗಿ ಕಂಡುಬರುತ್ತದೆ.

ಸಣ್ಣ ಕರುಗಳಿಗೆ ಲಸಿಕೆ ಕೊಡಬಹುದೆ?: ನಾಲ್ಕು ತಿಂಗಳ ಒಳಗಿನ ಕರುಗಳಿಗೆ ಲಸಿಕೆ ಕೊಡುವ ಅಗತ್ಯ ಇರುವುದಿಲ್ಲ. ಗಿಣ್ಣದ ಹಾಲಿನಲ್ಲೇ ರೋಗ ನಿರೋಧಕ ಶಕ್ತಿ ಇರುತ್ತದೆ. ಕರು ಹುಟ್ಟಿದ ಒಂದರಿಂದ ಎರಡು ತಾಸಿನೊಳಗೆ ಗಿಣ್ಣದ ಹಾಲು ಕೊಡಬೇಕು.

ರೋಗ ಶುರುವಾಗಿದ್ದು ಯಾವಾಗ?: ಆಡು, ಕುರಿಗಳಿಗೆ ಮೈಲಿಗೆ ಬರುವ ರೀತಿಯದ್ದೇ ಇನ್ನೊಂದು ಕ್ಯಾಪ್ರಿಫಾಕ್ಸ್‌ ವೈಡಿಡೆ ಎನ್ನುವ ವೈರಾಣು ಚರ್ಮಗಂಟು ರೋಗಕ್ಕೀಡು ಮಾಡುತ್ತಿದೆ. ರೋಗ ಬಂದಿರುವ ಜಾನುವಾರುಗಳನ್ನು ಪ್ರತ್ಯೇಕಿಸಬೇಕು. ಈ ರೋಗ 1928 ರಲ್ಲಿ ಆಫ್ರಿಕಾದಲ್ಲಿ ಕಾಣಿಸಿಕೊಂಡಿತು. 2019 ರಲ್ಲಿ ಭಾರತದಲ್ಲಿ ಮೊದಲು ಓಡಿಶಾದಲ್ಲಿ ಕಾಣಿಸಿಕೊಂಡಿತು.

ಕರೆ ಮಾಡಿದವರು: ಬಸವರಾಜ ಬಂಕದಮನಿ ಮುದಗಲ್‌, ಬಸವರಾಜ ಹುನೂರ, ಲಿಂಗಪ್ಪ ಗಡ್ಡಿಮನಿ ಡೋಣಮರಡಿ, ನೂರ್‌ಜಹಾನ್‌ ಬಿಚ್ಚಾಲಿ, ವೀರಭದ್ರಯ್ಯ ಮಸ್ಕಿ, ನೇಮಿಚಂದ್ರ ನಾಯಕ ಆಶಿಹಾಳತಾಂಡಾ, ಮಂಜುನಾಥ ವಲಗಂದಿನ್ನಿ, ಅಮೀನ್‌ಸಾಬ್‌ ಮುದಗಲ್‌, ಗ್ಯಾನಪ್ಪಯ್ಯ ಮುದಗಲ್‌, ಆದನಗೌಡ ವಟಗಲ್‌, ಕೃಷ್ಣಾ ಮುದಗಲ್‌, ನರೇಂದ್ರ ಚೌದರಿ ರಾಯಚೂರು, ಭೀಮಾರತಿ ಕೆ. ರಾಯಚೂರು.

ನಿರ್ವಹಣೆ: ನಾಗರಾಜ ಚಿನಗುಂಡಿ, ಬಾವಸಲಿ, ಶ್ರೀನಿವಾಸ ಇನಾಮದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.