ADVERTISEMENT

ದೇಶವನ್ನು ನಾಶಮಾಡುವ ಯಾವುದೇ ಪಕ್ಷವನ್ನು ಬೆಂಬಲಿಸಲ್ಲ– ಕವಿ ಗದ್ದರ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 13:52 IST
Last Updated 20 ಜನವರಿ 2019, 13:52 IST

ರಾಯಚೂರು: ದೇಶದಲ್ಲಿರುವ ಎಲ್ಲ ಧರ್ಮೀಯರಿಗೂ ಒಂದೊಂದು ಧರ್ಮಗ್ರಂಥವಿದೆ. ಅದರಂತೆ ದೇಶದ ಎಲ್ಲ ನಾಗರಿಕರಿಗೂ ಒಂದೇ ಸಂವಿಧಾನವಿದ್ದು, ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸಬೇಕಿದೆ. ಆದ್ದರಿಂದ ಸಂವಿಧಾನ ವಿರೋಧಿಗಳ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದ್ದು, ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್‌ ಸೇರಿದಂತೆ ದೇಶವನ್ನು ನಾಶ ಮಾಡುವ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಕವಿ ಗದ್ದರ್‌ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಿಧಾನ ಪ್ರಕಾರ ಆಡಳಿತ ನಡೆಸಿದರೆ ಸ್ವಾಗತ ಮಾಡಲಾಗುತ್ತದೆ. ಮನುವಾದಿ ಸಂಸ್ಕೃತಿಯ ಆಡಳಿತ ದೇಶಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ ಬಿಜೆಪಿ ಬೆಂಬಲಿತ ಒಕ್ಕೂಟವನ್ನು ವಿರೋಧ ಮಾಡಲಾಗುವುದು ಎಂದರು.

ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಮೀಸಲಾತಿ ನೀಡುವುದಕ್ಕೆ ವಿರೋಧವಿಲ್ಲ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಉದ್ದೇಶದಿಂದ ಶೇ 10ರಷ್ಟು ಮೀಸಲಾತಿ ನೀಡಿದೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.

ADVERTISEMENT

ಸಂವಿಧಾನ ಉಳಿಸುವುದಾಗಿ ಕಾಂಗ್ರೆಸ್‌ ನೇತೃತ್ವದ ಪಕ್ಷಗಳು ಮುಂದೆಬಂದಿದ್ದು, ಸಂವಿಧಾನದ ಪ್ರಕಾರ ಆಡಳಿತ ಮಾಡುವವರಿಗೆ ಬೆಂಬಲ ನೀಡಲಾಗುತ್ತದೆ. ಕಾಂಗ್ರೆಸ್‌ ಸಂಬಂಧದ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿವೆ. ಆದರೆ, ಸಿದ್ಧಾಂತವನ್ನು ಬಲಿಕೊಟ್ಟು ಕಾಂಗ್ರೆಸ್‌ನ್ನು ಅಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದೇಶದ ಸ್ಥಿತಿಗತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕವಿಗಳು ಮಾಡುವ ಅವಶ್ಯಕತೆಯಿದೆ. ಸಮಾಜವನ್ನು ನಿರ್ಮಾಣ ಮಾಡುವಂತಹ ಕಣ್ಣಿನ ಕಾಣದ ಹಲವು ವಿಷಯಗಳ ಬಗ್ಗೆಯೂ ಮಾಹಿತಿ ನೀಡಬೇಕಿದೆ. ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನ ಉಳಿಸುವ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿದೆ ಎಂದರು.

ಶೇ 25 ರಷ್ಟು ಸಂವಿಧಾನ ಜಾರಿಯಾಗಿದ್ದರೂ ದೇಶದಲ್ಲಿ ನಕ್ಸಲ್ ಚಟುವಟಿಕೆ ಇರುತ್ತಿರಲಿಲ್ಲ. ಇದನ್ನು ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ದೇಶದಲ್ಲಿ ಹೆಚ್ಚಿನ ತ್ಯಾಗವನ್ನು ಮಾಡಿದವರು ನಕ್ಸಲರು ಮಾತ್ರ. ನಕ್ಸಲರಿಗೆ ಆಯುಧಗಳೊಂದೆ ಅಸ್ತ್ರವಲ್ಲ, ಅಸ್ತ್ರಗಳಲ್ಲಿ ಆಯುಧಗಳು ಒಂದು ಭಾಗವಾಗಿವೆ ಎಂದು ತಿಳಿಸಿದರು.

ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿ ದೇಶದಲ್ಲಿ ಮಹಿಳೆಯರನ್ನು ಪೂಜ್ಯನೀಯ ಭಾವದಿಂದ ಶಕ್ತಿ ದೇವತೆಯಂತೆ ನೋಡಲಾಗುತ್ತದೆ. ಆದರೆ, ಸುಪ್ರೀಂಕೋರ್ಟ್‌ ಆದೇಶ ನೀಡಿದರೂ ದೇವಸ್ಥಾನಕ್ಕೆ ಪ್ರವೇಶ ನೀಡದಿರುವುದು ವಿಪರ್ಯಾಸವಾಗಿದೆ ಎಂದ ಅವರು ತಮಗೆ 71 ವರ್ಷ ವಯಸ್ಸಾಗಿದ್ದು, ತೆಲಂಗಾಣದಲ್ಲಿ ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿರುವುದಾಗಿ ಹೇಳಿದರು.

ಅಂಬಣ್ಣ ಆರೋಲಿ, ದಾನಪ್ಪ ಮಸ್ಕಿ, ಕೆ.ಪಿ.ಅನಿಲಕುಮಾರ, ಡಿಂಗ್ರಿ ನರಸಪ್ಪ, ಹೇಮರಾಜ ಅಸ್ಕಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.