ADVERTISEMENT

ಸಿಂಧನೂರು: ಡಿ.6ರಂದು ಅಂಬೇಡ್ಕರ್‌ ಪರಿನಿರ್ವಾಣ ದಿನಾಚರಣೆ

ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 11:25 IST
Last Updated 27 ನವೆಂಬರ್ 2021, 11:25 IST

ಸಿಂಧನೂರು: ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ತಾಲ್ಲೂಕು ಘಟಕ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮವನ್ನು ಡಿ.6 ರಂದು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ತೆರೆದ ಶೆಡ್ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸಂಚಾಲಕ ಎಂ.ಗಂಗಾಧರ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಬಡತನ, ನಿರುದ್ಯೋಗ, ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ, ಕೋಮುವಾದ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಸೇರಿದಂತೆ ಜ್ವಲಂತ ಮೂಲಸೌಕರ್ಯಗಳ ಕೊರತೆ ಜೀವಂತ ಉಳಿದಿವೆ. ಆಳುವ ವರ್ಗದ ಸರ್ಕಾರಗಳು ಸಂವಿಧಾನದ ಮೂಲ ಆಶಯಗಳನ್ನು ಅಳವಡಿಸಿಕೊಂಡಿದ್ದರೆ ದೇಶದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿತ್ತು. ಅಂಬೇಡ್ಕರ್ ಅವರು ದೈಹಿಕವಾಗಿ ಇಲ್ಲದೆ ಇರಬಹುದು. ಆದರೆ ಅವರು ತಮ್ಮ ಸಿದ್ದಾಂತ, ವಿಚಾರಧಾರೆಗಳ ಮೂಲಕ ನಮ್ಮನ್ನು ಸದಾ ಎಚ್ಚರಿಸುತ್ತಾ ಮಾರ್ಗದರ್ಶನ ಮಾಡುತ್ತಿದ್ದಾರೆಂಬ ಪರಿಕಲ್ಪನೆಯನ್ನು ಯಾರೂ ಮರೆಯಬಾರದು’ ಎಂದು ಹೇಳಿದರು.

ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನದ ಸಮಯದಲ್ಲಿ ದಲಿತ, ಅಲ್ಪಸಂಖ್ಯಾತ, ಶೋಷಿತ ಸಮುದಾಯಗಳು, ದಮನಿತ ವರ್ಗಗಳು ವಿಮೋಚನೆ ಆಗಬೇಕೆಂದರೆ, ಅಂಬೇಡ್ಕರ್ ಅವರ ಆಲೋಚನಾ ಕ್ರಮಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ. ಹೀಗಾಗಿ ಡಿ.6 ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತದನಂತರ ಪ್ರಾಂಗಣದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದರು.

ADVERTISEMENT

ಅಂಬೇಡ್ಕರ್ ನಡೆದು ಬಂದ ಹಾದಿ, ವಿಚಾರಧಾರೆ, ಪ್ರಸ್ತುತ ಅವರ ವಾದ ಕುರಿತು ಪ್ರಗತಿಪರ ಚಿಂತಕರು ವಿಶೇಷ ಉಪನ್ಯಾಸ ನೀಡುವರು ಎಂದರು.

ಒಕ್ಕೂಟದ ಸಂಚಾಲಕರಾದ ಅಮರೇಶ ಗಿರಿಜಾಲಿ, ದಾವಲಸಾಬ ದೊಡ್ಮನಿ, ಸೈಯ್ಯದ್ ರಬ್ಬಾನಿ ಜಾಗೀರದಾರ್, ಮಾಬುಸಾಬ ಬೆಳ್ಳಟ್ಟಿ, ಯಲ್ಲಪ್ಪ ಯದ್ದಲದೊಡ್ಡಿ, ಜಾಕೋಬ ದೊಡ್ಮನಿ, ಯಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.