ADVERTISEMENT

ಡಾ.ಸಿದ್ದಲಿಂಗಯ್ಯನವರ ಬರಹ ಶೋಷಿತರಿಗೆ ಶಕ್ತಿ: ಅಮರೇಶ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 14:36 IST
Last Updated 3 ಆಗಸ್ಟ್ 2021, 14:36 IST
ರಾಯಚೂರಿನ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಏರ್ಪಡಿಸಿದ್ದ ‘ಬಡವರ ನಗುವಿನ ಶಕ್ತಿ ಡಾ. ಸಿದ್ಧಲಿಂಗಯ್ಯ’ ಸಂಸ್ಮರಣ ಕಾರ್ಯಕ್ರಮದಲ್ಲಿ ಚಿಂತಕ ಅಮರೇಶ ಬಲ್ಲಿದವ ಉಪನ್ಯಾಸ ನೀಡಿದರು
ರಾಯಚೂರಿನ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಏರ್ಪಡಿಸಿದ್ದ ‘ಬಡವರ ನಗುವಿನ ಶಕ್ತಿ ಡಾ. ಸಿದ್ಧಲಿಂಗಯ್ಯ’ ಸಂಸ್ಮರಣ ಕಾರ್ಯಕ್ರಮದಲ್ಲಿ ಚಿಂತಕ ಅಮರೇಶ ಬಲ್ಲಿದವ ಉಪನ್ಯಾಸ ನೀಡಿದರು   

ರಾಯಚೂರು: ಶತಮಾನಗಳಿಂದ ಅವಮಾನ, ಸಂಕಟ, ಶೋಷಣೆಗೆ ಒಳಗಾದ ದಲಿತ ಸಮುದಾಯಕ್ಕೆ ಡಾ.ಸಿದ್ಧಲಿಂಗಯ್ಯನವರ ಬದುಕು ಮತ್ತು ಬರಹ ಅನನ್ಯ ಶಕ್ತಿ ನೀಡಿದೆ ಎಂದು ಚಿಂತಕ ಅಮರೇಶ ಬಲ್ಲಿದವ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಏರ್ಪಡಿಸಿದ್ದ ‘ಬಡವರ ನಗುವಿನ ಶಕ್ತಿ ಡಾ. ಸಿದ್ಧಲಿಂಗಯ್ಯ’ ಸಂಸ್ಮರಣ ಕಾರ್ಯಕ್ರಮದಲ್ಲಿ ‘ದಲಿತ ಚಳವಳಿಯ ಹರಿಕಾರ ಡಾ. ಸಿದ್ಧಲಿಂಗಯ್ಯ' ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.

‘ದಲಿತ ಚಳವಳಿಯನ್ನು ಹುಟ್ಟು ಹಾಕುವುದರ ಮೂಲಕ 20ನೇ ಶತಮಾನದ ಬಹುಮುಖ್ಯ ಕಾಳಜಿಯಾಗಿದ್ದರು. ಸಮಾನತೆಯ ಕೂಗನ್ನು ಎತ್ತಿ ಹಿಡಿದರು. ಚಳವಳಿಯ ಮೂಲಕ ಅಸಮಾನತೆ ವ್ಯವಸ್ಥೆಯ ವಿರುದ್ಧ ಪ್ರತಿರೋಧವನ್ನು ಒಡ್ಡಿ ದಲಿತರಲ್ಲಿ ಸ್ವಾಭಿಮಾನ ಹಾಗೂ ಜಾಗೃತಿ ಮೂಡಿಸಿದ ಮಹಾನ್ ಚೇತನವಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಸಾಹಿತಿ ದಸ್ತಗೀರಸಾಬ್ ದಿನ್ನಿ ಮಾತನಾಡಿ, ‘ಡಾ.ಅಂಬೇಡ್ಕರ್‌ ಅವರ ತಾತ್ವಿಕತೆ, ಪೆರಿಯಾರರ ವೈಚಾರಿಕ ಪ್ರಜ್ಞೆ, ಬುದ್ಧನ ಕರುಣೆ, ಕಾರ್ಲ್ಸ್ ಮಾರ್ಕ್ಸ್ ನ ವರ್ಗ ಸಂಘರ್ಷ, ಲೋಹಿಯಾರ ಸಮಾಜಮುಖಿ ಚಿಂತನೆಯ ಧಾರೆಗಳು ಸಿದ್ಧಲಿಂಗಯ್ಯನವರ ಕಾವ್ಯದ ಭಿತ್ತಿಯನ್ನು ರೂಪಿಸಿವೆ’ ಎಂದರು.

’ಅವರದು ದಲಿತ ಸಮುದಾಯದ ಪ್ರತಿಭಟನೆಯ ಕಾವ್ಯ. ಅಲ್ಲಿ ನಾಟಕೀಯತೆ ಇಲ್ಲ, ನಾಟುವ ಶಕ್ತಿಯಿದೆ. ಅವರ ಕಾವ್ಯದುದ್ದಕ್ಕೂ ಭೂತ, ವರ್ತಮಾನ ಮತ್ತು ಭವಿಷ್ಯದ ಕನಸುಗಾರಿಕೆ ತೆರೆದುಕೊಂಡಿದೆ’ ಎಂದು ಹೇಳಿದರು.

ಚಿಂತಕ ಬಾಬು ಭಂಡಾರಿಗಲ್ ಹಾಗೂ ಕವಿ ಆಂಜನೇಯ ಜಾಲಿಬೆಂಚಿಯವರು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಸವಪ್ರಭುಪಾಟೀಲ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಇಟಗಿ ಭೀಮನಗೌಡ, ಡಾ. ಜೆ.ಎಲ್.ಈರಣ್ಣ, ವೀರಹನುಮಾನ್, ಮಂಡಲಗಿರಿ ಪ್ರಸನ್ನ, ಎಚ್.ಎಚ್.ಮ್ಯಾದಾರ್, ಮಹಾದೇವಪ್ಪ, ಬಷೀರ್ ಅಹ್ಮದ್, ಎಂ.ಆರ್.ಭೇರಿ, ಮಲ್ಲೇಶ ಭೈರವ, ಗೋಪಾಲನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.