ADVERTISEMENT

‘ಭಾರತದ ಇಸ್ಲಾಮೀಕರಣ ಕನಸು ನನಸಾಗದು’

ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಕಾರ್ಯಕರ್ತರ ಸಮಾಗಮ: 3ನೇ ತ್ರೈಮಾಸಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 5:46 IST
Last Updated 12 ಡಿಸೆಂಬರ್ 2022, 5:46 IST
ಸಿಂಧನೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಉತ್ತರ ಕರ್ನಾಟಕದ ಪ್ರಾಂತೀಯ ಕಾರ್ಯಕರ್ತರ ಸಮಾಗಮ ಹಾಗೂ 3ನೇ ತ್ರೈಮಾಸಿಕ ವಾರ್ಷಿಕ ಸಮ್ಮೇಳನ ಹಿನ್ನೆಲೆಯಲ್ಲಿ ಅದ್ಧೂರಿ ಶೋಭಾಯಾತ್ರೆ ನಡೆಯಿತು
ಸಿಂಧನೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಉತ್ತರ ಕರ್ನಾಟಕದ ಪ್ರಾಂತೀಯ ಕಾರ್ಯಕರ್ತರ ಸಮಾಗಮ ಹಾಗೂ 3ನೇ ತ್ರೈಮಾಸಿಕ ವಾರ್ಷಿಕ ಸಮ್ಮೇಳನ ಹಿನ್ನೆಲೆಯಲ್ಲಿ ಅದ್ಧೂರಿ ಶೋಭಾಯಾತ್ರೆ ನಡೆಯಿತು   

ಸಿಂಧನೂರು: ‘2047 ಬರುವಷ್ಟರಲ್ಲಿ ಭಾರತ ದೇಶವನ್ನು ಸಂಪೂರ್ಣವಾಗಿ ಇಸ್ಲಾಮೀಕರಣ ಗೊಳಿಸಿ ಮುಸ್ಲಿಂ ರಾಷ್ಟ್ರ ನಿರ್ಮಿಸುತ್ತೇವೆಂಬ ಮುಸ್ಲಿಂ ಭಯೋತ್ಪಾದಕರ ಕನಸು ನನಸಾಗುವುದಿಲ್ಲ. ಅದಕ್ಕೆ ಹಿಂದೂಗಳು ಎಂದಿಗೂ ಅವಕಾಶ ಕೊಡುವುದಿಲ್ಲ’ ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಹೇಳಿದರು.

ಸ್ಥಳೀಯ ಆರ್‌ಜಿಎಂ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆ ಉತ್ತರ ಕರ್ನಾಟಕದ ಪ್ರಾಂತೀಯ ಕಾರ್ಯಕರ್ತರ ಸಮಾಗಮ ಹಾಗೂ 3ನೇ ತ್ರೈಮಾಸಿಕ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘600 ವರ್ಷಗಳ ಕಾಲ ಆಡಳಿತ ನಡೆಸಿದ ಮುಸ್ಲಿಮರಿಂದ ಭಾರತವನ್ನು ಇಸ್ಲಾಮಿ ರಾಷ್ಟ್ರ ನಿರ್ಮಿಸಲಾಗಲಿಲ್ಲ. ವ್ಯಾಪಾರದ ನೆಪದಲ್ಲಿ ಬಂದು 200 ವರ್ಷಗಳ ಕಾಲ ಆಳಿದ ಕ್ರೈಸ್ತರಿಂದ ಭಾರತವನ್ನು ಕ್ರೈಸ್ತ್ರೀಕರಣ ರಾಷ್ಟ್ರ ಮಾಡಲು ಸಾಧ್ಯವಾಗಿಲ್ಲ. ಹಿಂದೂಗಳು ಒಗ್ಗಟ್ಟಾಗಿದ್ದರೆ ಯಾವುದೇ ಧರ್ಮದ ಮತಾಂಧರಿಂದ ಭಾರತದಲ್ಲಿ ಹಿಂದೂ ಧರ್ಮದ ಪ್ರಭಾವವನ್ನು ತಗ್ಗಿಸಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಬಹುದೇವರನ್ನು ಆರಾಧಿಸುವ ವ್ಯಕ್ತಿಗಳನ್ನು ಇಲ್ಲದಂತೆ ಮಾಡುವ ಇಸ್ಲಾಂ ಧರ್ಮದ ಗುರುಗಳ ಆದೇಶ ಜಾರಿಯಾಗದಂತೆ ಎಚ್ಚರ ವಹಿಸಬೇಕಾಗಿದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮಿಟ್ಟಿ ಮಲ್ಕಾಪುರ ಗ್ರಾಮದ ಶಾಂತಾಶ್ರಮದ ನಿಜಾನಂದ ಸ್ವಾಮೀಜಿ ಮಾತನಾಡಿ, ‘ಸನಾತನ ಧರ್ಮದ ಆಚರಣೆಗಳನ್ನು ಉಳಿಸಿಕೊಳ್ಳುವ ಮೂಲಕ ಸ್ವಧರ್ಮ ನಿಷ್ಠೆಯನ್ನು ಗಟ್ಟಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರು ಜಾಗೃತರಾಗಬೇಕು’ ಎಂದರು.

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ವೇದಿಕೆಯ ಅಖಿಲ ಭಾರತೀಯ ಸಹಸಂಯೋಜಕ ಕಮಲೇಶ ಜಿ, ಜಿ.ಎಸ್.ಆರ್.ಕೆ. ರೆಡ್ಡಿ ವಕೀಲ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಚನ್ನನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ ದಾಸರ್, ಪ್ರಮುಖರಾದ ಅಮರೇಗೌಡ ವಿರುಪಾ ಪುರ, ಚಂದ್ರಕಲಾ, ದೇವೇಂದ್ರಪ್ಪ ಯಾಪಲಪರ್ವಿ, ಬಲವಂತರಾವ್ ಕುಲಕರ್ಣಿ, ಶ್ರೀಧರ ಕುಲಕರ್ಣಿ, ವೀರೇಶ ಚಿಂಚಿರಿಕಿ, ಮಹಾವೀರ ಓಸ್ತವಾರ್, ಅಯ್ಯನಗೌಡ ಇದ್ದರು.

ಶೋಭಾಯಾತ್ರೆ: ಇದಕ್ಕೂ ಮುನ್ನ ನಗರದ ಕನಕದಾಸ ಕಲ್ಯಾಣ ಮಂಟಪದಿಂದ ಆರ್‌ಜಿಎಂ ಶಾಲೆಯ ವರೆಗೆ ಅದ್ಧೂರಿ ಶೋಭಾಯಾತ್ರೆ ನಡೆಯಿತು. ನಿರುಪಾದೆಪ್ಪ ಜೋಳದರಾಶಿ, ಪ್ರಾಣೇಶ ದೇಶಪಾಂಡೆ, ರಾಮನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.