ರಾಯಚೂರು: ‘ಮಕ್ಕಳಲ್ಲಿ ಶಿಕ್ಷಣ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಸಂಘ-ಸಂಸ್ಥೆಗಳು, ಸರ್ಕಾರ ಜಾಗೃತಿ ಮೂಡಿಸುವ ಕೆಲಸಗಳನ್ನು ನಿರಂತರವಾಗಿ ಮಾಡಬೇಕು’ ಎಂದು ರೋಟರಿ ಕ್ಲಬ್ ಸೆಂಟ್ರಲ್‌ನ ಅಧ್ಯಕ್ಷ ಶರಣಬಸವ ಪಾಟೀಲ ಜೋಳದಹೆಡಗೆ ಹೇಳಿದರು.
ಇಲ್ಲಿಯ ಪಂಡಿತ ಜಂಬಲದಿನ್ನಿ ರಂಗ ಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಹಮ್ಮಿಕೊಂಡಿದ್ದ ಮಕ್ಕಳ ನೃತ್ಯೋತ್ಸವ ಹಾಗೂ ಕೊಳೆಗೇರಿಯ ಚಿಂದಿ ಆಯುವ ಮಕ್ಕಳ ಶಿಕ್ಷಣ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಲಾ ಸಂಕುಲ ಸಂಸ್ಥೆ ಇಂದು 100 ಬಡ ಮಕ್ಕಳಿಗೆ ಕಿಟ್‌ಗಳನ್ನು ವಿತರಿಸಿ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದೆ. ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಸರ್ಕಾರ ಮತ್ತು ಸಂಘ–ಸಂಸ್ಥೆಗಳು ಗಂಭೀರವಾಗಿ ಕಾರ್ಯನಿರ್ವಹಿಸಬೇಕಿದೆ. ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ನೀಡಬೇಕಿದೆ’ ಎಂದರು .
ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಶೋಭಾ ಯಾದವ ಮತ್ತು ಉಪ್ಪಾರ ಮಹಿಳಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷೆ ಸುರೇಖಾ ಉಪ್ಪಾರ, ದಂಡಪ್ಪ ಬಿರಾದಾರ, ಪ್ರಸನ್ನ ಹಡಗಲಿ, ಡಾ.ಫಾತಿಮಾ ಹುಸೇನ್ ಉಪಸ್ಥಿತರಿದ್ದರು.
ನಗರದ ಅಲ್ಲಮಪ್ರಭು ಕಾಲೊನಿಯಲ್ಲಿರುವ ಚಿಂದಿ ಆಯುವ ಬಡ ಕುಟುಂಬದ ಮಕ್ಕಳಿಗೆ ಹಾಗೂ ವಡವಾಟಿ, ಯಕ್ಲಾಸಪುರ, ಆಶಾಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಶಾಲಾ ಕಿಟ್ ವಿತರಿಸಲಾಯಿತು.
ಅಲೆಮಾರಿ ಜನಾಂಗದ ಸಿಂದೊಳ್ಳಿ ಕಲ್ಯಾಣ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಹಾವೇರಿ, ಸಂತೋಷಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮಾರುತಿ ಬಡಿಗೇರ ಸ್ವಾಗತಿಸಿದರು. ಕಲಾವಿದ ಅಮರೇಗೌಡ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.