ADVERTISEMENT

ರೈತರನ್ನು ಚಿಂತೆಗೀಡು ಮಾಡಿದ ಪಿಕಪ್ ಡ್ಯಾಂ ನಿರ್ಮಾಣ

ಕಂಚಿನಾಲೆ ಪಿಕಪ್ ಡ್ಯಾಂ ನಿರ್ಮಾಣ ಕಾಮಗಾರಿ ಪರಿಶೀಲಿಸುವಂತೆ ಜನಪ್ರತಿನಿಧಿಗಳಿಗೆ ಒತ್ತಾಯ

ಡಿ.ಎಚ್.ಕಂಬಳಿ
Published 20 ಜೂನ್ 2019, 15:38 IST
Last Updated 20 ಜೂನ್ 2019, 15:38 IST
ಸಿಂಧನೂರು ತಾಲ್ಲೂಕಿನ ಬಳಗಾನೂರು ಮತ್ತು ಗೌಡನಬಾವಿ ನಡುವೆ ಕಾಕುಮಾನ ಹಳ್ಳ (ಕಂಚಿನಾಲೆ)ಕ್ಕೆ ನಿರ್ಮಾಣ ಮಾಡುತ್ತಿರುವ ಸರಣಿ ಪಿಕಪ್ ಡ್ಯಾಂ ಕಾಮಗಾರಿ 
ಸಿಂಧನೂರು ತಾಲ್ಲೂಕಿನ ಬಳಗಾನೂರು ಮತ್ತು ಗೌಡನಬಾವಿ ನಡುವೆ ಕಾಕುಮಾನ ಹಳ್ಳ (ಕಂಚಿನಾಲೆ)ಕ್ಕೆ ನಿರ್ಮಾಣ ಮಾಡುತ್ತಿರುವ ಸರಣಿ ಪಿಕಪ್ ಡ್ಯಾಂ ಕಾಮಗಾರಿ    

ಸಿಂಧನೂರು: ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ₹100 ಕೋಟಿ ವೆಚ್ಚದಲ್ಲಿ ಸಿಂಧನೂರು ತಾಲ್ಲೂಕಿನ ಬಳಗಾನೂರು ಹತ್ತಿರ ಕಂಚಿನಾಲೆಗೆ ಅಡ್ಡಲಾಗಿ ಸೈಟ್ 3ರಲ್ಲಿ ಪಿಕಪ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಆದರೆ ಈ ಸರಣಿ ಪಿಕಪ್ ಡ್ಯಾಂಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಉದ್ದೇಶಿತ ಮತ್ತೊಂದು ಯೋಜನೆ ವಿಫಲವಾಗಲಿದೆ ಎನ್ನುವ ಆತಂಕ ರೈತರನ್ನು ಕಾಡಲಾರಂಭಿಸಿದೆ.

40 ವರ್ಷಗಳ ಹಿಂದೆ ನಿರ್ಮಾಣ ಮಾಡಲಾದ ಗೊರೇಬಾಳ ಪಿಕಪ್ ಡ್ಯಾಂ ಯೋಜನೆಯು ಸಹ ವಿಫಲವಾಗಿದ್ದು, ಈ ಯೋಜನೆ ಕೂಡಾ ಅದರಂತೆಯೆ ಆಗಲಿದೆ ಎಂದು ರೈತ ಸಂಘಟನೆಗಳು ಆರೋಪಿಸುತ್ತಿವೆ.

ಸಣ್ಣ ನೀರಾವರಿ ಇಲಾಖೆಯ ಪ್ರಧಾನ ಕಾಮಗಾರಿ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದೇ ನಾಲೆಗೆ ಏಳು ಪಿಕಪ್‍ಗಳನ್ನು ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ತಲಾ 35 ಮೀಟರ್ ಉದ್ದ, 1.6 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. 05803 ಎಂಸಿಯುಎಂ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. 40 ಹೆಕ್ಟೆರ್ ಜಮೀನಿಗೆ ಪರೋಕ್ಷವಾಗಿ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಅಂದಾಜನ್ನು ಉಲ್ಲೇಖಿಸಲಾಗಿದೆ.

ADVERTISEMENT

‘ಉದ್ದೇಶಿತ ಈ ಯೋಜನೆ ಯಶಸ್ವಿಗೆ ಬೇಕಾಗುವಷ್ಟ ನಾಲೆಯ ವಿಸ್ತಾರ ಇಲ್ಲ. ನಾಲೆಗೆ ಪಿಕಪ್ ಮಾಡಿದರೆ ಹಿಂಭಾಗದಲ್ಲಿ ನೀರು ನಿಲ್ಲಬಹುದಾದ ಜಮೀನಿಗೆ ಇಲ್ಲಿಯವರೆಗೂ ಯಾವುದೇ ಪರಿಹಾರ ಒದಗಿಸಿಲ್ಲ. ಈ ಯೋಜನೆ ಕುರಿತು ರೈತರಿಗೆ ಮಾಹಿತಿಯೂ ನೀಡಿಲ್ಲ. ತುಂಬಾ ಅಡವಿಯಲ್ಲಿರುವ ಈ ಸರಣಿ ಪಿಕಪ್ ಡ್ಯಾಂಗಳ ಕಾಮಗಾರಿಗಳನ್ನು ಸಾರ್ವಜನಿಕರು ಗಮನಿಸದ ಕಾರಣದಿಂದ ಗುತ್ತಿಗೆದಾರರು ಅತ್ಯಂತ ಕಳಪೆಯಾಗಿ ಕಾಮಗಾರಿ ನಿರ್ಮಿಸುತ್ತಿದ್ದಾರೆ. ಸಣ್ಣನೀರಾವರಿ ಇಲಾಖೆ ಶಾಮೀಲಾಗಿರುವದರಿಂದ ಕಾಮಗಾರಿಯ ಮೇಲ್ವಿಚಾರಣೆಯು ನಡೆಯುತ್ತಿಲ್ಲ’ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಶರಣಪ್ಪ ಆರೋಪಿಸಿದರು.

ಪಿಕಪ್ ಡ್ಯಾಂನಿಂದ ವಿತರಣೆಯಾಗುವ ನೀರಿಗೂ ಸಹ ಸಮರ್ಪಕವಾದ ಕಾಲುವೆ ನಿರ್ಮಾಣ ಮಾಡಿಲ್ಲ. ಅಲ್ಲದೆ ಈ ಡ್ಯಾಂನ ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನು ಭತ್ತ ಬೆಳೆಯುವ ಪ್ರದೇಶವಾಗಿದ್ದು, ಅತ್ಯಂತ ಬೆಲೆ ಬಾಳುತ್ತದೆ. ಈ ಭೂಮಿಗೆ ಪರಿಹಾರ ಒದಗಿಸಲು ಯಾವುದೇ ಕ್ರಮಕೈಗೊಳ್ಳದಿರುವುದರಿಂದ ರೈತರು ಪ್ರಸ್ತುತ ಕಾಮಗಾರಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರತಿಯೊಂದು ಪಿಕಪ್ ಡ್ಯಾಂಗೆ 100 ಎಕರೆಯಂತೆ ನೀರಾವರಿಯಾಗುತ್ತಿದೆ. 6 ಪಿಕಪ್ ಡ್ಯಾಂಗಳನ್ನು ನಿರ್ಮಿಸಿ 600 ಎಕರೆಗೆ ನೀರು ಕೊಡುವ ಉದ್ದೇಶ ಹೊಂದಿರುವ ಇಲಾಖೆಯು ಅವೈಜ್ಞಾನಿಕವಾಗಿ ಕಾಮಗಾರಿ ನಿರ್ಮಿಸುತ್ತಿದ್ದಾರೆ. ಇದರಿಂದ ಉದ್ದೇಶಿತ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ’ ಎಂದು ಬಳಗಾನೂರು, ಗೌಡನಬಾವಿ, ತಿಪ್ಪನಹಟ್ಟಿ ರೈತರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಶಾಸಕ ಪ್ರತಾಪಗೌಡ ಅವರು ಸ್ಥಳಕ್ಕೆ ಭೇಟಿ ನೀಡಬೇಕು. ಈ ಕಾಮಗಾರಿ ವೀಕ್ಷಿಸುವ ಮೂಲಕ ಅವೈಜ್ಞಾನಿಕ ಪಿಕಪ್ ಡ್ಯಾಂ ನಿರ್ಮಾಣಕ್ಕೆ ಕಡಿವಾಣ ಹಾಕಿ ಸರ್ಕಾರದ ಯೋಜನೆ ರೈತರಿಗೆ ತಲುಪುವಂತೆ ಕ್ರಮಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.