ADVERTISEMENT

ಲಿಂಗಸುಗೂರು: ‘ರೈತರು ಆದಾಯ ವೃದ್ಧಿಗೆ ಆದ್ಯತೆ ನೀಡಿ’

ಬೇಳೆಕಾಳುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:16 IST
Last Updated 9 ಫೆಬ್ರುವರಿ 2023, 6:16 IST
ಲಿಂಗಸುಗೂರು ಕೃಷಿ ವಿಸ್ತರಣಾ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಬೇಳೆಕಾಳುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನ ಕಾರ್ಯಾಗಾರವನ್ನು ರೈತ ಮಹಿಳೆಯರು ಉದ್ಘಾಟಿಸಿದರು
ಲಿಂಗಸುಗೂರು ಕೃಷಿ ವಿಸ್ತರಣಾ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಬೇಳೆಕಾಳುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನ ಕಾರ್ಯಾಗಾರವನ್ನು ರೈತ ಮಹಿಳೆಯರು ಉದ್ಘಾಟಿಸಿದರು   

ಲಿಂಗಸುಗೂರು: ‘ಜಮೀನುಗಳಲ್ಲಿ ಬೆಳೆದ ಫಸಲನ್ನು ಅಥವಾ ಬೇಳೆ ಕಾಳುಗಳನ್ನು ನೇರವಾಗಿ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುವ ಬದಲು ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಮೂಲಕ ಆದಾಯ ವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಕೃಷಿ ವಿಸ್ತರಣ ಕೇಂದ್ರ ಮುಖ್ಯಸ್ಥೆ ವಾಣಿಶ್ರೀ ಎಸ್‍ ಮನವಿ ಮಾಡಿದರು.

ಬುಧವಾರ ಇಲ್ಲಿ ಆಯೋಜಿಸಿದ್ದ ಬೇಳೆಕಾಳು ಸಂರಕ್ಷಣೆ ಮತ್ತು ಮೌಲ್ಯವರ್ಧನೆ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಂಸ್ಕರಣೆ ಮತ್ತು ಮೌಲ್ಯವರ್ಧನೆ ದೇಶದ ಆಹಾರ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸರ್ಕಾರಗಳು ಕೂಡ ಬೇಳೆಕಾಳು ಬೆಳೆಯಲು ಹಾಗೂ ಸಂರಕ್ಷಣೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿವೆ. ಅಂತೆಯೇ ತಾಲ್ಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೇಳೆಕಾಳು ಬೆಳೆದು ಸಂರಕ್ಷಣೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಬೇಳೆಕಾಳು ಸಂರಕ್ಷಣೆ ಜೊತೆಗೆ ನೂತನ ತಂತ್ರಜ್ಞಾನ ಮೂಲಕ ಸಣ್ಣ ಕೈಗಾರಿಕೆ ಉದ್ಯಮ ಆರಂಭ, ಆಹಾರ ಪ್ಯಾಕಿಂಗ್‍, ಮಾರಾಟ ಪರವಾನಗಿ, ಬೇಳೆಕಾಳು ಸಂರಕ್ಷಣೆ ಹಾಗೂ ಸಣ್ಣ ಉದ್ಯಮ ಆರಂಭಿಸಲು ಸಿಗುವ ಸಾಲ ಸೌಲಭ್ಯ ಕುರಿತು ಕೃಷಿ ವಿಜ್ಞಾನಿಗಳಾದ ಪಿ.ಎಫ್‍ ಮಠದ, ಕೆ.ಟಿ ರಾಮಪ್ಪ ಹಾಗೂ ಹಣಕಾಸು ಸಾಕ್ಷರತಾ ಅಧಿಕಾರಿ ಸಿ.ಬಿ ಪಾಟೀಲ ಮಾಹಿತಿ ನೀಡಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಂಜುನಾಥ ಜಾವೂರು, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಪುತ್ರ ಪಾಟೀಲ, ಕೃಷಿಕರಾದ ಸರ್ವೇಶ್ವರಿ, ನಾಗವೇಣಿ, ಶಿವಲೀಲಾ, ಮಹಾನಂದಾ, ಶ್ರೀಕಾಂತ ಲೊಕೇಶ, ಚಿನ್ನಪ್ಪ, ಶರಣಪ್ಪ ಗೋನವಾರ, ಪ್ರಜ್ವಲ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.