ರಾಯಚೂರು: ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹಾಗೂ ರೈತರಿಂದಲೇ ಪಂಪ್‌ಸೆಟ್ ಗಳ ವೆಚ್ಚ ಭರಿಸುವ ತೀರ್ಮಾನ ಖಂಡಿಸಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಧರಣಿ ನಡೆಸಲಾಯಿತು
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿ ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೈತ ವಿರೋಧಿ, ಕೋಮುವಾದಿ, ಭ್ರಷ್ಟಾಚಾರ ಆಡಳಿತ ನೀಡಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ನೀಡಿದರೂ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಕಾರ್ಯವೈಖರಿಯನ್ನೇ ಮುಂದುವರಿಸಿದೆ. ಸರ್ಕಾರ ಬದಲಾದರೂ ನೀತಿಗಳು ಬದಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷದ ಅವಧಿಯಲ್ಲೇ ಮಹರ್ಷಿ ವಾಲ್ಮೀಕಿ ಅಭಿವೃದ್ಧಿಯ ₹187 ಕೋಟಿ ಹಗರಣದ ಆರೋಪಕ್ಕೆ ಒಳಗಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರೈತರ ಸರಣಿ ಆತ್ಮಹತ್ಯೆ ಪ್ರಕರಣ ನಡೆದರೂ ತಡೆಯಲು ರೈತಪರ ನೀತಿ ರೂಪಿಸಿಲ್ಲ ಎಂದು ದೂರಿದರು.
ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವತಃ ಅವರೇ ವೆಚ್ಚಭರಿಸಬೇಕೆಂಬ ತೀರ್ಮಾನ ಖಂಡನೀಯ. ರೈತರಿಂದ ಸುಮಾರು ₹2 ರಿಂದ3 ಲಕ್ಷ ವೆಚ್ಚ ಭರಿಸಲು ಹೇಗೆ ಸಾಧ್ಯ ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಮುಖಂಡರು ಈ ಹಿಂದಿನ ಪದ್ದತಿಯಂತೆ ಮುಂದುವರೆಸಬೇಕು. ಕರ ನಿರಾಕರಣೆ ಚಳವಳಿಯಲ್ಲಿ ರೈತ ಕುಟುಂಬದವರು ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಳಕೆಯನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷ ಏಪ್ರಿಲ್ ನಿಂದ ಈವರೆಗೆ 1182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ರೈತಪರ ಕಾರ್ಯಕ್ರಮ ರೂಪಿಸಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕೃಷಿ ಬೆಲೆ ಆಯೋಗವನ್ನು ಬಲಗೊಳಿಸಬೇಕು. ಹಿಂದೆಂದು ಕಂಡಿರಿಯದ ಬರದ ನಡುವೆಯೂ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ವಸೂಲಾತಿಗೆ ಕಿರುಕುಳ ನೀಡುತ್ತಿದ್ದಾರೆ. ರೈತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಫಸಲ್ ಭೀಮಾ ಯೋಜನೆಯ ಎಲ್ಲ ಬೆಳೆಗಳಿಗೆ ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆ ಹಾನಿ ನಿರ್ಧರಿಸಬೇಕು. ವಿಮಾ ಕಂಪನಿಗಳು ಉಳಿಸಿಕೊಂಡ ಬಾಕಿ ಮೊತ್ತ ರೈತರ ಬ್ಯಾಂಕ್ ಖಾತೆಗಳಿಗೆ ಹಾಕಬೇಕು. ಫಸಲು ಪಹಣಿ, ದುರಸ್ತಿ ಪಕ್ಕಾ ಪೋಡು, ಹದ್ದುಬಸ್ತು ಶುಲ್ಕ ದುಬಾರಿಯಾಗಿದ್ದು ಕೂಡಲೇ ಶುಲ್ಕ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಖರೀದಿ ಕೇಂದ್ರಗಳ ಮೂಲಕ ರೈತರಿಂದ ಜೋಳ, ರಾಗಿ ಇತರೆ ಉತ್ಪನ್ನ ಖರೀದಿಸಿ ಬಾಕಿ ಉಳಿಸಿಕೊಂಡ ರೈತರಿಗೆ ಹಣ ನೀಡಬೇಕು. ಬರ ಪರಿಹಾರದ ಹಣ ಸಾಲದ ಕಂತುಗಳಿಗೆ ಬಳಸಿಕೊಳ್ಳುತ್ತಿರುವುದನ್ನು ತಡೆದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಕೂಡಲೇ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ತುಂಗಭದ್ರಾ ಎಡದಂಡೆ ನಾಲೆಯ ಅನಧಿಕೃತ ನೀರಾವರಿ ತಡೆಗಟ್ಟಿ, ರಾಯಚೂರು, ಮಾನ್ವಿ, ಸಿರವಾರ ತಾಲ್ಲೂಕುಗಳಿಗೆ ನೀರು ಒದಗಿಸಬೇಕು. ನಾರಾಯಣಪುರ ಬಲದಂಡೆ ನಾಲೆಯ 18 ಉಪ ಕಾಲುವೆಗಳ ದುರಸ್ತಿ ಕಾರ್ಯ ಅರೆಬರೆಯಾಗಿದ್ದು ಕಳಪೆ ಕಾಮಗಾರಿ ಸರಿಪಡಿಸಿ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ರೈತ ಸಂಘದ ರಾಜ್ಯ ಘಟಕದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ಕಾರ್ಯದರ್ಶಿ ವೆಂಕಪ್ಪ ಕಾರಬಾರಿ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಮಲ್ಲಣ್ಣ ದಿನ್ನಿ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ ಇಂಗಳದಾಳ, ಕಾರ್ಯಾಧ್ಯಕ್ಷ ಬಸನಗೌಡ ಮಲ್ಲನಮಡಗು, ತಾಲ್ಲೂಕು ಘಟಕದ ಅಧ್ಯಕ್ಷೆ ಮಲ್ಲಮ್ಮ ಹುನಕುಂಟಿ, ಲಿಂಗಾರೆಡ್ಡಿ ಪಾಟೀಲ, ಎ.ಗೋವಿಂದ ನಾಯಕ ಗಾಣಧಾಲ, ರಮೇಶ ಅಬಕಾರಿ ಸುಕೇಶ್ವರಹಾಳ, ವೀರೇಶ ಗವಿಗಟ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.