ADVERTISEMENT

ಲಿಂಗಸುಗೂರು | ಪ್ರವಾಹ ಭೀತಿ: ನಡುಗಡ್ಡೆಯಲ್ಲಿ ಸಿಲುಕಿದ ಜನ

ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿಯ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 15:42 IST
Last Updated 28 ಜೂನ್ 2025, 15:42 IST
ಲಿಂಗಸುಗೂರು ತಾಲ್ಲೂಕಿನ ಕರಕಲಗಡ್ಡಿಯಲ್ಲಿ ಸಿಲುಕಿರುವ ಮಂದಿ
ಲಿಂಗಸುಗೂರು ತಾಲ್ಲೂಕಿನ ಕರಕಲಗಡ್ಡಿಯಲ್ಲಿ ಸಿಲುಕಿರುವ ಮಂದಿ   

ಲಿಂಗಸುಗೂರು: ಬಸವಸಾಗರ ಜಲಾಶಯದಿಂದ ಶನಿವಾರ ಮಧ್ಯಾಹ್ನದಿಂದ ಕೃಷ್ಣಾನದಿಗೆ 1 ಲಕ್ಷ ಕ್ಯೂಸೆಕ್‌ಗಳಷ್ಟು ನೀರು ಹರಿಸುತ್ತಿದ್ದು, ನದಿಯಲ್ಲಿ ನೀರಿನಮಟ್ಟ ಗಂಟೆ ಗಂಟೆಗೂ ಹೆಚ್ಚಾಗುತ್ತಿ‌ದೆ. ಇದರಿಂದ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಿಗೆ ಹಾಗೂ ನಡುಗಡ್ಡೆಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಪ್ರತಿ ವರ್ಷ ಜುಲೈ ಕೊನೆ ಇಲ್ಲವೇ ಆಗಸ್ಟ್ ತಿಂಗಳಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ಈ ವರ್ಷ ಜೂನ್ ತಿಂಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ನಡುಗಡ್ಡೆಯಲ್ಲಿ ವಾಸಿಗಳ ಪರದಾಟ:

ADVERTISEMENT

ಜೂನ್ 15ರಿಂದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಆದರೆ, ನೀರಿನಮಟ್ಟ ಹೆಚ್ಚಾಗುವ ವಿಷಯ ತಿಳಿಯದ ಕರಕಲಗಡ್ಡಿಯಲ್ಲಿ ಚಿಕ್ಕ ಮಕ್ಕಳು ಸೇರಿ ಒಟ್ಟು ಏಳು ಮಂದಿ, ಮಾದರಗಡ್ಡಿಯಲ್ಲಿ ಇಬ್ಬರು ಹಾಗೂ ಹೊಂಕಮ್ಮನಗಡ್ಡಿಯಲ್ಲಿ 3 ಮಂದಿಯೊಂದಿಗೆ ಕುರಿ, ಕೋಳಿ, ಜಾನುವಾರುಗಳು ನಡುಗಡ್ಡೆಯಲ್ಲಿ ಉಳಿಯುವಂತಾಗಿದೆ.

ಮಾದರಗಡ್ಡಿ ಹಾಗೂ ಹೊಂಕಮ್ಮನಗಡ್ಡಿ ನಿವಾಸಿಗಳು ತೆಪ್ಪದಲ್ಲಿ ಯರಗೋಡಿಗೆ ಬಂದು ಹೋಗುತ್ತಾರೆ. ಆದರೆ, ಕರಕಲಗಡ್ಡಿ ನಿವಾಸಿಗಳು ಕಳೆದ 15 ದಿನಗಳ ಹಿಂದೆ ತೆಪ್ಪದಲ್ಲಿ ಯಳಗುಂದಿ ಮೂಲಕ ಲಿಂಗಸುಗೂರಿಗೆ ಬಂದು ಅಕ್ಕಿ, ಬೆಳೆ ಸೇರಿ ಇತರೆ ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗಿದ್ದರು. ಈಗ ಮರಳಿ ಬರಬೇಕಾದರೆ ನದಿಯಲ್ಲಿ ನೀರಿನಮಟ್ಟ ಹೆಚ್ಚಾಗುತ್ತಿದ್ದು, ಬೋರ್ಗರೆದು ಹರಿಯುವ ನೀರಿನಲ್ಲಿ ತೆಪ್ಪ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ನಡುಗಡ್ಡೆಯಲ್ಲಿ ಉಳಿಯುವಂತಾಗಿದೆ.

‘15 ದಿನಗಳ ಹಿಂದೆ ತಂದಿದ್ದ ಕಿರಾಣಿ ಸಾಮಗ್ರಿಗಳು ಈಗ ಖಾಲಿಯಾಗುವ ಹಂತಕ್ಕೆ ತಲುಪಿವೆ. ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ’ ಎಂದು ಕರಕಲಗಡ್ಡಿ ನಿವಾಸಿ ದ್ಯಾಮಣ್ಣ ಅಮ್ಮಾಪುರ ಹೇಳುತ್ತಾರೆ.

ಸಿಕ್ಕಿಲ್ಲ ಪರಿಹಾರ:

ತಾಲ್ಲೂಕಿನ ನಡುಗಡ್ಡೆಗಳಲ್ಲಿನ ಭೂಮಿ ಖರೀದಿಸಿ ಬೇರೆಡೆ ಭೂಮಿ ಹಾಗೂ ಮನೆ ಒದಗಿಸಿದರೆ ನಡುಗಡ್ಡೆ ಬಿಟ್ಟು ಬರುತ್ತೇವೆ. ಇಲ್ಲವೇ ನಡುಗಡ್ಡೆಗಳಿಗೆ ಕಾಲ್ನಡಿಗೆ ಸೇತುವೆಯನ್ನಾದರೂ ನಿರ್ಮಿಸಿಕೊಡಿ ಎಂದು ನಡುಗಡ್ಡೆ ನಿವಾಸಿಗಳು ಬಹುವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. 

‘ಕರಕಲಗಡ್ಡಿಯಲ್ಲಿ 6 ಕುಟುಂಬಗಳ 30 ಮಂದಿಯಲ್ಲಿ ಕೆಲವರು ಬೆಂಗಳೂರಿನಲ್ಲಿ ದುಡಿಯಲು ಹೋಗಿದ್ದರೆ, ಇನ್ನೂ ಕೆಲವರು ಯಳಗುಂದಿಯಲ್ಲಿ ಶೆಡ್‌ನಲ್ಲಿ ನೆಲೆಸಿದ್ದಾರೆ. ಏಳು ಮಂದಿ ಮಾತ್ರ ಕರಕಲಗಡ್ಡಿಯಲ್ಲೇ ಉಳಿದಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಅಂಗಲಾಚುವಂತಾಗಿದೆ’ ಎಂದು ಕರಕಲಗಡ್ಡಿ ನಿವಾಸಿ ಆದಪ್ಪ ಅಳಲುತೋಡಿಕೊಂಡಿದ್ದಾರೆ.

ಕುರಿ ಮೇಕೆ ಜಾನುವಾರೊಂದಿಗೆ ಕರಕಲಗಡ್ಡಿ ನಿವಾಸಿಗಳು

ಸದ್ಯ 3 ನಡುಗಡ್ಡೆಗಳಲ್ಲಿ 12 ಮಂದಿ ವಾಸ ಈಡೇರಿಲ್ಲ ಶಾಶ್ವತ ಪರಿಹಾರದ ಭರವಸೆ ಕಾಲ್ನಡಿಗೆ ಸೇತುವೆ ಅಳಲಿಗೂ ಸಿಕ್ಕಿಲ್ಲ ಸ್ಪಂದನೆ

‘ಸುರಕ್ಷಿತ ಸ್ಥಳಕ್ಕೆ ಕರೆತರಲು ಕ್ರಮ’ ‘ಪ್ರವಾಹ ಪರಿಸ್ಥಿತಿ ಎದುರಿಸಲು ಈಗಾಗಲೇ ತಾಲ್ಲೂಕುಮಟ್ಟದ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಈಗಾಗಲೇ ಅಧಿಕಾರಿಗಳು ನದಿತೀರದ ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ‌‌ಕರಕಲಗಡ್ಡಿ ಉಳಿದಿರುವ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗುವುದು’ ಎಂದು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.