ರಾಯಚೂರು: ರಾಜ್ಯದ ರಾಜಧಾನಿಗೆ ಬೆಳಕು ಕೊಡುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್) ರಾಯಚೂರು ತಾಲ್ಲೂಕಿನಲ್ಲೇ ಇದ್ದರೂ ರಾಯಚೂರು ನಗರದ ಸ್ಥಿತಿ ಮಾತ್ರ ದೀಪದ ಕೆಳಗಿನ ಕತ್ತಲಿನಂತಾಗಿದೆ.
ಆರು ತಿಂಗಳ ಅವಧಿಯಲ್ಲಿ ರಾಯಚೂರು ಮಹಾನಗರಕ್ಕೆ ಒಂದು ದಿನವೂ ಯಾವುದೇ ಅಡೆತಡೆ ಇಲ್ಲದಂತೆ 24 ಗಂಟೆ ನಿರಂತರವಾಗಿ ವಿದ್ಯುತ್ ಪೂರೈಕೆಯಾದ ನಿದರ್ಶನ ಇಲ್ಲ. ದಾಖಲೆಯೂ ಇಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನ ಬೇಸತ್ತು ಹೋಗಿದ್ದಾರೆ.
ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ವಿದ್ಯುತ್ ಯಾವಾಗ ಕೈ ಕೊಡುತ್ತದೋ ಗೊತ್ತಾಗುವುದೇ ಇಲ್ಲ. ಜೆಸ್ಕಾಂನ ಬೇಜವಾಬ್ದಾರಿಯಿಂದ ಆಸ್ಪತ್ರೆಗಳು, ಬ್ಯಾಂಕ್‌ಗಳು, ಹೋಟೆಲ್‌ಗಳು, ವಾಣಿಜ್ಯ ವ್ಯವಹಾರ ನಡೆಸುತ್ತಿರುವವರು ನಿತ್ಯ ತೊಂದರೆ ಅನುಭವಿಸುತ್ತಲೇ ಇದ್ದಾರೆ.
‘ಜೆಸ್ಕಾಂ ಗ್ರಾಹಕರ ಕುಂದುಕೊರತೆ ಸಭೆ ನಡೆಸಿದರೂ ಅದಕ್ಕೆ ಕವಡೆ ಕಾಸಿನ ಬೆಲೆ ಇಲ್ಲ. ಪತ್ರಿಕಾ ಪ್ರಕಟಣೆ ನೀಡಿ ನಂತರ ಕಡತಗಳಲ್ಲಿ ದಾಖಲಿಸಿ ಇಟ್ಟುಕೊಂಡರೇ ಮುಗಿಯಿತು. ಅದೇ ಅವರ ಗ್ರಾಹಕರ ಸಭೆ. ಸಹಾಯವಾಣಿ ಇದ್ದರೂ ಸ್ಥಿರ ದೂರವಾಣಿಯ ರಿಸಿವರ್ ಎತ್ತಿ ಇಡುತ್ತಾರೆ. ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಜನರ ದೂರವಾಣಿ ಕರೆಗಳನ್ನೇ ಸ್ವೀಕರಿಸುವುದಿಲ್ಲ’ ಎಂಬ ಆರೋಪಗಳಿವೆ.
ಗ್ರಾಹಕರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದನೆ ಇಲ್ಲದ ಕಾರಣ ವ್ಯವಸ್ಥೆ ಇನ್ನಷ್ಟು ಬಿಗಡಾಯಿಸಿದೆ. ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಹಾಗೂ ಹಣಕಾಸು ಸಂಸ್ಥೆಗಳು ಹೆಚ್ಚು ನಷ್ಟಕ್ಕೆ ಒಳಗಾಗುತ್ತಿವೆ. ವಿದ್ಯುತ್ ಕೈಕೊಟ್ಟ ತಕ್ಷಣ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಸಂಜೆ 6 ಗಂಟೆಗೆ ಮುಗಿಯಬೇಕಾದ ಕೆಲಸವನ್ನು ರಾತ್ರಿ 10 ಗಂಟೆ ವರೆಗೂ ಕಾದು ಕುಳಿತು ಮಾಡಬೇಕಾಗಿದೆ.
ಆಸ್ಪತ್ರೆಗಳಲ್ಲಿ ಇನ್ವರ್ಟರ್ ಅಳವಡಿಸಿದ್ದರೂ ಕಟ್ಟಡದಲ್ಲಿನ ಎಲ್ಲ ಬಲ್ಬಗಳು ಉರಿಯುವುದಿಲ್ಲ. ಬಹಳ ಹೊತ್ತು ವಿದ್ಯುತ್ ಹೋದಾಗ ಇರುವ ಬಲ್ಬಗಳೂ ಆಫ್ ಆಗುತ್ತವೆ. ಬೇಕರಿ ಹಾಗೂ ಹಾಲು ಮಾರಾಟ ಮಾಡುವವರು ಸಹ ನಷ್ಟ ಅನುಭವಿಸ ತೊಡಗಿದ್ದಾರೆ. ರೆಫ್ರಿಜಿರೇಟರ್‌ಗಳು ಆಫ್ ಆಗಿ, ಅದರಲ್ಲಿ ಇಡುವ ವಸ್ತುಗಳೂ ಹಾಳುತ್ತಿವೆ.
ಕೈಕೊಡುವ ಇಂಟರ್‌ನೆಟ್
ರಾಯಚೂರು ನಗರದಲ್ಲಿ ಅನೇಕ ಕಡೆ ಮೊಬೈಲ್ ಟವರ್‌ಗಳು ಇದ್ದರೂ ನೇರವಾಗಿ ವಿದ್ಯುತ್ ಅನ್ನು ಅವಲಂಬಿಸಿವೆ. ವಿದ್ಯುತ್ ಕೈಕೊಟ್ಟ ನಂತರ ಅಲ್ಲಿಯ ಉಪಕರಣಗಳು ಸ್ಥಗಿತಗೊಳ್ಳುತ್ತವೆ. ಬಹುತೇಕ ಟೆಲಿಕಾಂ ಕಂಪನಿಗಳು ಜನರೇಟರ್ ಆನ್ ಮಾಡುವುದಿಲ್ಲ. ಇಂಧನ ಉಳಿಸಲು ಹೆಚ್ಚು ಒತ್ತುಕೊಡುತ್ತವೆ. ಹೀಗಾಗಿ ಮೊಬೈಲ್ ಫೋನ್ ಕರೆಗಳು ಕಡಿತಗೊಳ್ಳುತ್ತಿವೆ. ಇಂಟರ್‌ನೆಟ್ ಸಹ ವೇಗ ಕಳೆದುಕೊಳ್ಳುತ್ತದೆ.
‘ಲ್ಯಾಪ್‌ಟಾಪ್‌ನಲ್ಲಿ ಬ್ಯಾಟರಿ ಬ್ಯಾಕ್‌ಅಪ್ ಇಟ್ಟುಕೊಂಡು ಕೆಲಸ ಮಾಡಬೇಕೆಂದರೆ ಇಂಟರ್‌ನೆಟ್ ಇರುವುದಿಲ್ಲ. ವಿದ್ಯುತ್ ಕಡಿತಗೊಳಿಸಿದ ನಂತರ ಜನ ಹಲವು ಸಮಸ್ಯೆ ಎದುರಿಸಬೇಕಾಗಿದೆ. ಜೆಸ್ಕಾಂ ಅಧಿಕಾರಿಗಳು ಜನರ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಿದ್ಧವಿಲ್ಲ’ ಎಂದು ಗ್ರಾಹಕರಾದ ಶಂಕರ, ಖಾಸಿಂಸಾಬ್, ತಾಹೇರ್ ಪಾಶಾ ಬೇಸರ ವ್ಯಕ್ತಪಡಿಸುತ್ತಾರೆ.
‘ಜೆಸ್ಕಾಂ ಅಧಿಕಾರಿಗಳು ತುರ್ತು ನಿರ್ವಹಣೆಗಾಗಿ ವಿದ್ಯುತ್ ಕಡಿತಗೊಳಿಸುವ ಕುರಿತು ಒಂದು ಬಾರಿ ಪ್ರಕಟಣೆ ಕೊಟ್ಟರೆ ವಾರದಲ್ಲಿ ಹತ್ತು ಬಾರಿ ವಿದ್ಯುತ್ ಕಡಿತಗೊಳಿಸುತ್ತಾರೆ’ ಎಂದು ನಗರದ ಲಿಂಗುಸುಗೂರು ರಸ್ತೆಯ ರೊಟ್ಟಿ ಕೇಂದ್ರದ ಶಿವಕುಮಾರ ದೂರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.