ADVERTISEMENT

ಜಾಲಹಳ್ಳಿ: ಬಡವರಿಗೆ ಅಗತ್ಯ ವಸ್ತು ತಲುಪಿಸಿ

ಕೊರೊನಾ ತಡೆಗೆ ಟಾಸ್ಕ್‌ಫೋರ್ಸ್ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 16:37 IST
Last Updated 9 ಏಪ್ರಿಲ್ 2020, 16:37 IST
ಜಾಲಹಳ್ಳಿ ಪಟ್ಟಣದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಟಾಸ್ಕ್‌ಫೋರ್ಸ್‌ ಸಭೆ ನಡೆಯಿತು
ಜಾಲಹಳ್ಳಿ ಪಟ್ಟಣದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಟಾಸ್ಕ್‌ಫೋರ್ಸ್‌ ಸಭೆ ನಡೆಯಿತು   

ಜಾಲಹಳ್ಳಿ: ಪಟ್ಟಣದಲ್ಲಿರುವ ಬಡವರು, ನಿರ್ಗತಿಕರನ್ನು ಪಟ್ಟಿ ಮಾಡಿ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ನಾಯಕ ಗಲಗ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ನಡೆದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.

ಕಂದಾಯ ಇಲಾಖೆಯಿಂದ ನಾಲ್ಕು ಕುಟುಂಬಗಳಿಗೆ ಅಹಾರ ಧಾನ್ಯ ವಿತರಣೆ ಮಾಡಲಾಗಿದೆ ಎಂದು ಕಂದಾಯ ನಿರೀಕ್ಷಕ ದೇವರೆಡ್ಡಿ ಸಭೆಯಲ್ಲಿ ತಿಳಿಸಿದರು.

ADVERTISEMENT

ಇನ್ನೂ ಕೆಲವು ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಬೇಕಿದೆ. ಅವರ ಪಟ್ಟಿ ಸಿದ್ಧಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಟ್ಟಣದಲ್ಲಿ 364 ಜನ ಗುಳೆ ಹೋಗಿ ವಾಪಸ್ ಬಂದಿದ್ದಾರೆ. ಅವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಬೇಕು. ಅವರ ಮನೆಯ ಬಾಗಿಲಿಗೆ ಕೊರೊನಾ ಜಾಗೃತಿ ಭಿತ್ತಿಪತ್ರ ಅಂಟಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು. ಅಲ್ಲದೆ, ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಕಾನ್‌ಸ್ಟೆಬಲ್‌ ಮುರಿಗೆಪ್ಪ ಸಭೆ ತಿಳಿಸಿದರು.

ಗ್ರಾಮದ ಬಹುತೇಕ ವಾರ್ಡ್‌ಗಳ ಚರಂಡಿಗಳಲ್ಲಿ ಹೂಳು ತುಂಬಿದೆ. ಅದನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿಯಲ್ಲಿ ಟ್ರ್ಯಾಕ್ಟರ್‌ ಇಂಜಿನ್‌ ಇದೆ. ಟ್ರ್ಯಾಲಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಅದರೆ, ಇಲ್ಲಿಯವರೆಗೆ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ತಾಲ್ಲೂಕು ಪಂಚಾಯಿತಿಯಿಂದ ಟ್ರ್ಯಾಲಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ತಾಕೀತು ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಯ್ಯ ಮುರಾಳ, ಕಾರ್ಯದರ್ಶಿ ನಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.