ADVERTISEMENT

ರಾಯಚೂರು: ನೌಕರರ ಸಮಸ್ಯೆ ಬಗೆಹರಿಸಲು ಸಲಹಾ ಸಮಿತಿ

ಸರ್ಕಾರಿ ನೌಕರರು ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 17:08 IST
Last Updated 24 ನವೆಂಬರ್ 2020, 17:08 IST
ರಾಯಚೂರಿನ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ಕಾರಿ ನೌಕರರು ಮತ್ತು ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಮಾತನಾಡಿದರು
ರಾಯಚೂರಿನ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ಕಾರಿ ನೌಕರರು ಮತ್ತು ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಮಾತನಾಡಿದರು   

ರಾಯಚೂರು: ಸರ್ಕಾರಿ ನೌಕರರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವುದಕ್ಕಾಗಿ ಜಿಲ್ಲಾಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಲಹಾ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ಕಾರಿ ನೌಕರರು ಮತ್ತು ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘದಲ್ಲಿ ಪ್ರತಿಯೊಂದು ಚಟುವಟಿಕೆಗೆ ಲೆಕ್ಕಪತ್ರ ನಿರ್ವಹಣೆ ಮಾಡಬೇಕಾಗುತ್ತದೆ. ಸರ್ಕಾರಿ ನೌಕರರ ಭವನಕ್ಕೆ ಸಂಬಂಧಿಸಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಲೆಕ್ಕಪತ್ರ ವಿವರ ಸಲ್ಲಿಸದಿದ್ದರೆ, ಕ್ರಿಮಿನಲ್‌ ಮೊಕದ್ದಮೆ ಹಾಕಲಾಗುತ್ತದೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳು ಈ ಬಗ್ಗೆ ತಿಳಿವಳಿಕೆ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.

ADVERTISEMENT

ನೌಕರರ ಕೆಲವು ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಇದುವರೆಗೂ ನೌಕರರಿಗೆ 10 ಸಿಎಲ್‌ಗಳನ್ನು ನೀಡಲಾಗುತ್ತಿತ್ತು. ಮನವಿ ಮಾಡಿಕೊಂಡು ಸಿಎಲ್‌ಗಳನ್ನು 15 ಕ್ಕೆ ಏರಿಕೆ ಮಾಡಿಸಲಾಗಿದೆ. ಸರ್ಕಾರಿ ನೌಕರರು ನಿಧನರಾದರೆ ಅಂತ್ಯಸಂಸ್ಕಾರಕ್ಕಾಗಿ ₹5 ಸಾವಿರ ನೀಡುತ್ತಿದ್ದ ಮೊತ್ತವನ್ನು ₹15 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ₹5 ಸಾವಿರ ನೀಡಲಾಗುತ್ತಿದೆ. ದಸರಾ ರಜೆ ಮುಂದುವರಿಸಲು ಮನವಿ ಮಾಡಲಾಗಿದೆ. ನೌಕರರ ಹಿತ ಕಾಯುವುದಕ್ಕೆ ಸಂಘ ಕೆಲಸ ಮಾಡುತ್ತಿದೆ. ರಾಜ್ಯ ಘಟಕದಲ್ಲಿ ₹9 ಕೋಟಿ ಹಣವಿದ್ದು, ಅದನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಪ್ರತಿ ಜಿಲ್ಲಾ ಮಟ್ಟದಲ್ಲಿರುವ ಸದ್ಯದ ನೌಕರರ ಭವನ ತೆರವುಗೊಳಿಸಿ ₹50 ಲಕ್ಷ ವೆಚ್ಚದಲ್ಲಿ ನೂತನ ಭವನ ನಿರ್ಮಿಸಲಾಗುವುದು ಎಂದು ಹೇಳಿದರು.

ಜಿಲ್ಲಾಮಟ್ಟದಲ್ಲಿಯೇ ನೌಕರರು ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾಗಮ ಯೋಜನೆಯಲ್ಲಿ ಕೆಲವು ನ್ಯೂನ್ಯತೆಗಳಿದ್ದವು. ಹೀಗಾಗಿ ಯೋಜನೆ ಸ್ಥಗಿತವಾಗಿದೆ. ನೌಕರರ ವರ್ಗಾವಣೆ ತಡೆ ಹಿಡಿಯಲಾಗಿತ್ತು. ನಿರಂತರ ವರ್ಗಾವಣೆ ಆಗದಿರುವ ನೌಕರರ ವರ್ಗಾವಣೆ ಮುಂದುವರಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ, ಕೋಶಾಧ್ಯಕ್ಷ ಶ್ರೀನಿವಾಸ, ಪದಾಧಿಕಾರಿಗಳಾದ ಶಿವರುದ್ರಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ರಾಜಾ ವೆಂಕಟೇಶ, ಮಹಿಪಾಲರೆಡ್ಡಿ ಯಾದಗಿರಿ, ಭೀಮಪ್ಪ, ಶಂಕರಗೌಡ, ಭೀಮಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.