ADVERTISEMENT

ಶೈಕ್ಷಣಿಕ ಸಮಸ್ಯೆ ಪರಿಹರಿಸಲು ವಿಫಲ

ಎಸ್ಎಫ್ಐ ರಾಯಚೂರು ಜಿಲ್ಲಾ ಸಮ್ಮೇಳನದಲ್ಲಿ ಗುರುರಾಜ ದೇಸಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:38 IST
Last Updated 10 ಫೆಬ್ರುವರಿ 2020, 14:38 IST
ರಾಯಚೂರಿನ ಜೆಸಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಎಫ್ಐ ರಾಯಚೂರು ಜಿಲ್ಲಾ ಸಮ್ಮೇಳನವನ್ನು ರಾಜ್ಯ ಘಟಕದ ಕಾರ್ಯದರ್ಶಿ ಗುರುರಾಜ ದೇಸಾಯಿ ಉದ್ಘಾಟಿಸಿ ಮಾತನಾಡಿದರು
ರಾಯಚೂರಿನ ಜೆಸಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಎಫ್ಐ ರಾಯಚೂರು ಜಿಲ್ಲಾ ಸಮ್ಮೇಳನವನ್ನು ರಾಜ್ಯ ಘಟಕದ ಕಾರ್ಯದರ್ಶಿ ಗುರುರಾಜ ದೇಸಾಯಿ ಉದ್ಘಾಟಿಸಿ ಮಾತನಾಡಿದರು   

ರಾಯಚೂರು:ಹಿಂದುಳಿದ ಹೈದರಾಬಾದ್‌ ಕರ್ನಾಟಕ ಭಾಗದ ಜ್ವಲಂತ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದುಎಸ್ಎಫ್ಐ ರಾಜ್ಯ ಘಟಕದ ಕಾರ್ಯದರ್ಶಿ ಗುರುರಾಜ ದೇಸಾಯಿ ಹೇಳಿದರು.

ನಗರದ ಜೆಸಿ ಭವನದಲ್ಲಿ ಸೋಮವಾರ ನಡೆದ ‘ರಾಯಚೂರು ವಿಶ್ವವಿದ್ಯಾಲಯದ ಬಲವರ್ಧನೆಗಾಗಿ 371(ಜೆ) ಕಲಂ ಸಮರ್ಪಕ ಜಾರಿಗಾಗಿ ಹಾಗೂ ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತಾಯಿಸಿ ನಡೆದ 21 ನೆಯ ಎಸ್ಎಫ್ಐ ರಾಯಚೂರು ಜಿಲ್ಲಾ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದರು.

ಈ ಭಾಗದ ಶೈಕ್ಷಣಿಕ ಅಭಿವೃದ್ದಿಗೆ ಸಹಕಾರಿಯಾಗಲಿರುವ ರಾಯಚೂರು ವಿಶ್ವವಿದ್ಯಾಲಯದ ಮಂಜೂರಿ ಮಾಡಿದ್ದರೂ ಸ್ಥಾಪನೆ ಮಾಡುತ್ತಿಲ್ಲ. ಇದನ್ನು ಬಲವರ್ಧನೆ ಮಾಡುವುದಕ್ಕೆ ಶ್ರಮಿಸಿಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿರುವುದು ಸರಿಯಲ್ಲ ಎಂದರು.

ADVERTISEMENT

ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಒಂದಾದ ರಾಯಚೂರು ಶೈಕ್ಷಣಿಕವಾಗಿ ತೀರ ಹಿಂದುಳಿದಿದೆ. ಆದರೆ, ಈ ಭಾಗದ ಜ್ವಲಂತ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ.ನೂತನ ವಿಶ್ವವಿದ್ಯಾಲಯ ಸ್ಥಾಪನೆಗೆ ವಿವಿಧ ಸಂಘಟನೆಗಳು, ಈ ಭಾಗದ ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಹಲವಾರು ಹೋರಾಟಗಳನ್ನು ಮಾಡುತ್ತಾ ಬರುತ್ತಿವೆ ಎಂದು ಹೇಳಿದರು.

ನೂತನ ವಿಶ್ವವಿದ್ಯಾಲಯ ಬಲವರ್ಧನೆಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದ್ದು ಸರಿಯಲ್ಲ. ಶಿಕ್ಷಣವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿರುವುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಸಮುದಾಯ ಈ ಜಿಲ್ಲೆಯ, ರಾಜ್ಯದ ಮತ್ತು ದೇಶದ ಶಿಕ್ಷಣ ವ್ಯವಸ್ಥೆಯ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಮಾತನಾಡಿ, ಹಿಂದುಳಿದ ಭಾಗದ ರಾಯಚೂರು ಜಿಲ್ಲೆಗೆ ಆಳುವ ಸರ್ಕಾರಗಳು ವ್ಯವಸ್ತಿತವಾಗಿ ನಿರ್ಲಕ್ಷಿಸುತ್ತಾ ಬಂದಿವೆ. ಈಗ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿಯೂ ಮೊಂಡುತನ ಪ್ರದರ್ಶಿಸುತ್ತಿದ್ದು, ವಿಶ್ವವಿದ್ಯಾಲಯ ಆರಂಭ ಮಾಡದೇ ನಿರ್ಲಕ್ಷ್ಯ ಮುಂದುವರೆಸಲಾಗಿದೆ. ಈ ವಿಷಯದಲ್ಲಿ ಈ ಭಾಗದ ಜನಪ್ರತಿನಿಧಿಗಳೂ ಸಹ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತಿದ್ದಾರೆ ಎಂದು ದೂರಿದರು.

ಶೈಕ್ಷಣಿಕ ಆಭಿವೃದ್ಧಿಗೆ ಪುರಕವಾದ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಹೋರಾಟಗಳು ನಡಯಬೇಕಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ಜಾಗೃತರಾಗಿ ಹೋರಾಟವನ್ನೂ ಗಟ್ಟಿಗೊಳಿಸಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ, ಶೈಕ್ಷಣಿಕ ವಲಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಎಸ್‌ಎಫ್‌ಐ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವುದನ್ನು ಪ್ರಶ್ನಿಸುತ್ತಾ ಬರುತ್ತಿದೆ.

ಎಸ್‌ಎಫ್‌ಐ ಕೆ.ಜಿ. ವಿರೇಶ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಹಾಸ್ಟೇಲ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಹಾಸ್ಟೇಲ್‌ಗಳ ಸಂಖ್ಯೆ ಹೆಚ್ಚಳ ಮಾಡಬೇಕಿದೆ ಎಂದರು.

ಎಸ್‌ಎಫ್‌ಐ ರಾಜ್ಯ ಘಟಕದ ಉಪಾಧ್ಯಕ್ಷ ಶಬ್ಬೀರ್ ಜಾಲಹಳ್ಳಿ, ಜಿಲ್ಲಾ ಕಾರ್ಯದರ್ಶಿ ರಮೇಶ ವೀರಾಪುರ, ಮಾಜಿ ಮುಖಂಡರಾದ ಕೆ.ಜಿ ವಿರೇಶ.ಡಿವೈಎಪ್ಐ ರಾಜ್ಯ ಮುಖಂಡರಾದ ಶಿವಪ್ಪ ಬ್ಯಾಗವಾಟ್, ಮುಖಂಡರಾದ ದೀಲ್ ಶಾದ್, ಲಿಂಗರಾಜ ಕಂದಗಲ್, ಹೈದರ್ ಅಲಿ, ಚಿದಾನಂದ ಕರಿಗೂಳಿ, ವೈಜನಾಥ್, ಮಹಾಲಿಂಗ, ಸುನೀಲ್, ಮೌನೇಶ ಗೌರಿ ಇದ್ದರು.

ವೈಜನಾಥ ನಿರೂಪಿಸಿದರು. ಚಿದಾನಂದ ಸ್ವಾಗತಿಸಿದರು. ಎಸ್ಎಫ್‌ಐ ಜಿಲ್ಲಾ ಘಟಕದ ನೂತನ ಕಾರ್ಯದರ್ಶಿ ಲಿಂಗರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.