ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ 17 ಜೋಡಿ

ಮುಂಗಾರು ಹಬ್ಬದ ನಿಮಿತ್ತ ಸಾಮೂಹಿಕ ವಿವಾಹ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 14:26 IST
Last Updated 13 ಜೂನ್ 2019, 14:26 IST
ರಾಯಚೂರಿನಲ್ಲಿ ಗುರುವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ವಧು, ವರರು
ರಾಯಚೂರಿನಲ್ಲಿ ಗುರುವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ವಧು, ವರರು   

ರಾಯಚೂರು: ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಮುನ್ನೂರು ಕಾಪು ಸಮಾಜದ ಯುವಕ ಮಂಡಳಿಯಿಂದ ಗದ್ವಾಲ ರಸ್ತೆಯಲ್ಲಿನ ಲಕ್ಷ್ಮಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 17 ಜೋಡಿಗಳ ವಿವಾಹ ನೆರವೇರಿತು.

19ನೇ ವರ್ಷದ ಮುಂಗಾರು ಹಬ್ಬವನ್ನು ಜೂನ್‌ 16, 17 ಹಾಗೂ 18ರಂದು ಆಚರಣೆ ಮಾಡಲಾಗುತ್ತಿದ್ದು, ತನಿಮಿತ್ತ ಇದೇ ಮೊದಲ ಬಾರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ವಿವಾಹ ಬಂಧನಕ್ಕೆ ಒಳಗಾದ ನವ ಜೋಡಿಗಳಿಗೆ ಮಾಂಗಲ್ಯ, ಮುತ್ತು, ಕಾಲುಂಗುರ ಹಾಗೂ ಒಂದು ಜೊತೆ ಬಟ್ಟೆ ವಿತರಣೆ ಮಾಡಲಾಯಿತು.

ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ಶಾಸಕ ಡಾ.ಶಿವರಾಜ ಪಾಟೀಲ, ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹಾಗೂ ಇತರರು ನೂತನ ವಧು ವರರನ್ನು ಆಶೀರ್ವದಿಸಿದರು.

ADVERTISEMENT

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಸಂಖ್ಯೆಯ ಜನರಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಪೊಲೀಸ್‌ ಬಂದೋಬಸ್ತ್ ಕೂಡ ಒದಗಿಸಲಾಗಿತ್ತು. 17 ಜೋಡಿಗಳ ಸಂಬಂಧಿಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಕಲ್ಯಾಣ ಮಂಟಪದ ಆವರಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಬಿ.ತಿಮ್ಮಾರೆಡ್ಡಿ, ಚಂದ್ರಶೇಖರ ರೆಡ್ಡಿ, ಶ್ರೀನಿವಾಸರೆಡ್ಡಿ, ದೊಡ್ಡ ಮಲ್ಲೇಶ, ಮಹೇಂದ್ರರೆಡ್ಡಿ, ಜಿ.ವೆಂಕಟರೆಡ್ಡಿ, ರವೀಂದ್ರ ಜಲ್ದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.