ADVERTISEMENT

ಕೃಷ್ಣಾನದಿಗೆ ಪ್ರವಾಹ: ನದಿಪಾತ್ರದಲ್ಲಿ ಕಟ್ಟೆಚ್ಚರ

ನಾರಾಯಣಪುರ ಜಲಾಶಯದಿಂದ ಹೆಚ್ಚುತ್ತಿದೆ ಹೊರಹರಿವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 13:28 IST
Last Updated 23 ಜುಲೈ 2021, 13:28 IST
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಪಕ್ಕದ ಕೃಷ್ಣಾನದಿ ಸೇತುವೆಯಲ್ಲಿ ಶುಕ್ರವಾರ ಪ್ರವಾಹದ ನೋಟ
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಪಕ್ಕದ ಕೃಷ್ಣಾನದಿ ಸೇತುವೆಯಲ್ಲಿ ಶುಕ್ರವಾರ ಪ್ರವಾಹದ ನೋಟ   

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹೊರಬಿಡುತ್ತಿರುವ ನೀರಿನ ಪ್ರಮಾಣವು ಗಣನೀಯ ಹೆಚ್ಚಳವಾಗಿದ್ದು, ಲಿಂಗಸುಗೂರು ತಾಲ್ಲೂಕಿನಲ್ಲಿ ನಡುಗಡ್ಡೆಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಶುಕ್ರವಾರ ಮುಳುಗಡೆಯಾಗಿದೆ.

3 ಲಕ್ಷ ಕ್ಯುಸೆಕ್‌ ಅಡಿ ನೀರು ಹರಿದು ಬರುತ್ತಿದ್ದು, ನದಿಪಾತ್ರ ಹಾಗೂ ಸೇತುವೆಗಳಿರುವ ಕಡೆಗಳಲ್ಲಿ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಡಳಿತವು ಹಲವು ಕ್ರಮಗಳನ್ನು ಕೈಗೊಂಡಿದೆ.

2009 ಮತ್ತು 2019 ರಲ್ಲಿ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣೆ ಕ್ರಮಗಳ ಕುರಿತು ಅಧ್ಯಯನದ ಮೂಲಕ ಯೋಜನೆಯನ್ನು ರೂಪಿಸಲಾಗಿದೆ. ಕೃಷ್ಠಾನದಿ ಪಾತ್ರದಲ್ಲಿ ಪ್ರವಾಹಕ್ಕೆ ಒಳಪಡುವ 72 ಗ್ರಾಮಗಳನ್ನು ಗುರುತಿಸಲಾಗಿದೆ. ಕೃಷ್ಣಾನದಿ ಪಾತ್ರ ಮತ್ತು ತುಂಗಭಧ್ರ ನದಿ ಪಾತ್ರದ 105 ಪ್ರವಾಹ ಪೀಡಿತ ಗ್ರಾಮಗಳನ್ನೊಳಗೊಂಡ 35 ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚನೆಯನ್ನು ಮಾಡಿದ್ದು, ಈಗಾಗಲೇ ತರಬೇತಿಯನ್ನು ಮಾಡಲಾಗಿದೆ.

ADVERTISEMENT

ಪ್ರವಾಹಮಟ್ಟವನ್ನು ಅರಿಯುವುದಕ್ಕಾಗಿ ಜಿಲ್ಲೆಯಲ್ಲಿ ಅಂತರರಾಜ್ಯದ ಹಿರಿಯ ಅಧಿಕಾರಿಗಳ, ಅಂತರ ಜಿಲ್ಲಾಮಟ್ಟದ ಅಧಿಕಾರಿಗಳ ಮತ್ತು ಗ್ರಾಮ ಮಟ್ಟದ ಅಧಿಕಾರಿಗಳ ಪ್ರತ್ಯೇಕ ವ್ಯಾಟ್ಸ್‌ಆ್ಯಪ್‌ ಗ್ರುಪ್‌ ಮಾಡಿಕೊಳ್ಳಲಾಗಿದೆ. ಮಾಹಿತಿಯನ್ನು ಮಾಧ್ಯಮಗಳಿಗೂ ನೀಡಲಾಗುತ್ತದೆ. ಜಲಾಶಯಗಳ ಹೊರಹರಿವು ಮತ್ತು ಒಳಹರಿವುಗಳ ಕುರಿತು ಹಾಗೂ ಮಳೆ ಮಾಹಿತಿಯನ್ನು ಪ್ರತಿ ಘಂಟೆಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹಿರಿಯ ಅಧಿಕಾರಿಗಳನ್ನು ಕೃಷ್ಣಾನದಿ ಪಾತ್ರದಲ್ಲಿ ಅಪಾಯಕ್ಕೆ ಒಳಪಡುವ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಗ್ರಾಮದಲ್ಲಿ ವಾಸ್ತವ್ಯ ಹೂಡಲು ಆದೇಶವನ್ನು ಮಾಡಲಾಗಿದೆ. ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಪ್ರವಾಹ ಪೀಡಿತ ಸ್ಥಳಗಳಿಗೆ ಈಗಾಗಲೇ ಭೇಟಿ ನೀಡುತ್ತಿದ್ದಾರೆ ಹಾಗೂ ವಿಡಿಯೋ ಸಂವಾದದ ಮೂಲಕ ಮುನ್ನೆಚ್ಚರಿಕೆಯನ್ನು ನೀಡುತ್ತಿದ್ದಾರೆ.

ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಹಗಲಿರುಳು ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ ತೆರೆಯಲಾಗಿದೆ. ರಾಯಚೂರು ಜಿಲ್ಲಾ ಕಚೇರಿ 08532-226383&1077, ರಾಯಚೂರು ತಹಶೀಲ್ದಾರ್‌ 08532-226210, ದೇವದುರ್ಗ ತಹಶೀಲ್ದಾರ್‌ 08531-260064 ಹಾಗೂ ಲಿಂಗಸುಗೂರು ತಹಶೀಲ್ದಾರ್‌ 08537-257365 ಸಂಖ್ಯೆಗಳಿಗೆ ಕರೆ ಮಾಡಬಹುದು.

ಮುನ್ನೆಚ್ಚರಿಕೆ ಕ್ರಮವಾಗಿ ಕೃಷ್ಣನದಿ ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲೆಯ ರಾಯಚೂರು, ದೇವದುರ್ಗ ಮತ್ತು ಲಿಂಗಸುಗೂರು ತಾಲ್ಲೂಕಿನಲ್ಲಿ ಒಟ್ಟು 30 ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿದೆ. ಅವಶ್ಯಕವೆನಿಸಿದರೆ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.

ನದಿಪಾತ್ರದಲ್ಲಿ ಅಪಾಯಕ್ಕೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ಸಮಿತಿಗಳು ಪ್ರತಿ ಗಂಟೆಗೊಮ್ಮೆ ಗ್ರಾಮದ ಪರಿಸ್ಥಿತಿಯನ್ನು ತಹಶೀಲ್ದಾರರಿಗೆ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ನೀಡುತ್ತಿದ್ದಾರೆ. ನದಿ ಪಾತ್ರದಲ್ಲಿ ಅಪಾಯಕ್ಕೆ ಒಳಪಡುವ ಗ್ರಾಮಗಳಲ್ಲಿ ಡಂಗೂರವನ್ನು ಸಾರಲಾಗುತ್ತಿದೆ ಮತ್ತು ಮಾಧ್ಯಮ ಪ್ರತಿ ನಿಧಿಯಿಂದ ದಿನ ಪತ್ರಿಕೆಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನದಿಯಲ್ಲಿ ನಾಡದೋಣಿ (ತೆಪ್ಪಾ)ಯನ್ನು ಚಾಲನೆ ಮಾಡುವುದನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಅಗ್ನಿ ಶಾಮಕದಳ ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಯು ರಕ್ಷಣಾ ಕಾರ್ಯಕ್ಕೆ ಸಿದ್ದ ತಗೊಂಡಿರುತ್ತಾರೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮೂರು ಟೂಬ್ ಬೋಟ್‌ಗಳನ್ನು ಮೂರು ತಾಲ್ಲೂಕುಗಳಲ್ಲಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.