ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 36 ಸಹಾಯಕರ ಹುದ್ದೆಗಳ ನೇಮಕಾತಿಗೆ ಏಳು ವರ್ಷಗಳ ಹಿಂದೆಯೇ ಪರೀಕ್ಷೆ ನಡೆಸಿದರೂ ವಿಶ್ವವಿದ್ಯಾಲಯ ಹಾಗೂ ಸರ್ಕಾರದ ನಡುವಿನ ತಾಂತ್ರಿಕ ಸಮಸ್ಯೆಯಿಂದಾಗಿ ವಿಶ್ವವಿದ್ಯಾಲಯವು ನೇಮಕಾತಿ ಆದೇಶ ಕೊಡಲು ಹಿಂದೇಟು ಹಾಕುತ್ತಿದೆ.
ನೇಮಕಾತಿ ಪಟ್ಟಿಯಲ್ಲಿರುವ 36 ಅಭ್ಯರ್ಥಿಗಳ ಪೈಕಿ 12 ಅಭ್ಯರ್ಥಿಗಳ ವಯೋಮಿತಿ ಮೀರುತ್ತಿರುವ ಕಾರಣ ಅವರು ಆತಂಕದಲ್ಲಿದ್ದಾರೆ. ಕಲ್ಯಾಣ ಕರ್ನಾಟಕದ ಹುದ್ದೆಗಳ ನೇಮಕಾತಿಗೆ ಸರ್ಕಾರ ಒತ್ತುಕೊಟ್ಟರೂ ವಿಶ್ವವಿದ್ಯಾಲಯದ ಸಹಾಯಕರ ಹುದ್ದೆಗಳ ನೇಮಕಾತಿಗೆ ಮೀನಮೇಷ ಮಾಡುತ್ತಿರುವುದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
36 ಸಹಾಯಕರ ಹುದ್ದೆಗಳಿಗೆ 2015–2016ರಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ನೇಮಕಾತಿ ಪ್ರಕ್ರಿಯೆ ನಡೆದರೂ ವಿಶ್ವವಿದ್ಯಾಲಯವು ನೇಮಕಾತಿ ಆದೇಶ ಕೊಡದ ಕಾರಣ ಅಭ್ಯರ್ಥಿಗಳು ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್, ವಿಶ್ವವಿದ್ಯಾಲಯಕ್ಕೆ ನೇಮಕಾತಿ ಆದೇಶ ನೀಡುವಂತೆ ನಿರ್ದೇಶನ ನೀಡಿದರೂ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿಲ್ಲ.
2024ರ ಫೆಬ್ರುವರಿ 19ರಂದು ಕೃಷಿ ಇಲಾಖೆಯ ಕಾರ್ಯದರ್ಶಿಯವರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದು ಕೃಷಿ ವಿಶ್ವವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ₹1.88 ಕೋಟಿ ಆಂತರಿಕ ಸಂಪನ್ಮೂಲ ಕ್ರೋಡೀಕರಿಸಿ ವೇತನ ಪಾವತಿಸಬೇಕು ಎಂದು ಸೂಚಿಸಿದ್ದಾರೆ.
2024ರ ಅಕ್ಟೋಬರ್ 5ರಂದು ರಾಯಚೂರಿಗೆ ಭೇಟಿಕೊಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಆದೇಶ ನೀಡುವಂತೆ ಕುಲಪತಿ ಅವರಿಗೆ ಮೌಖಿಕ ಆದೇಶ ನೀಡಿದ್ದರು. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ವಿಶ್ವವಿದ್ಯಾಲಯವು ಸರ್ಕಾರಕ್ಕೆ ಪ್ರಸ್ರಾವ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರವು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ತನ್ನ ಆಂತರಿಕ ಸಂಪನ್ಮೂಲದಿಂದಲೇ ಸಹಾಯಕರ ವೇತನ ಪಾವತಿಸಲು ಕ್ರಮ ವಹಿಸಿ ನೇಮಕಾತಿ ಮಾಡಿಕೊಳ್ಳಬೇಕೆಂದು ಆದೇಶ ನೀಡಿದೆ. ಇದೇ ಆದೇಶವೇ ನೇಮಕಾತಿಗೆ ತೊಡಕಾಗಿದೆ.
ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಕರೆದಿದ್ದಾಗ 1,200 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿಗಳ ಪರಿಶೀಲನೆ ಸಂದರ್ಭದಲ್ಲಿ 150 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಅರ್ಹತೆ ಪಡೆದಿದ್ದರು. ಕೆವಿಕೆಯ 18 ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 18 ಸೇರಿ ಒಟ್ಟು 36 ಸಹಾಯಕರ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ಅಂಕಗಳನ್ನು ಕ್ರೋಡೀಕರಿಸಿ ನೇಮಕಾತಿ ಪಟ್ಟಿ ಸಿದ್ಧಪಡಿಸಲಾಗಿದೆ.
‘ನೇಮಕಾತಿ ಪಟ್ಟಿಯಲ್ಲಿರುವ 36 ಅಭ್ಯರ್ಥಿಗಳ ಪೈಕಿ ಕೆಲವರ ವಯೋಮಿತಿ ಮೀರುತ್ತಿದೆ. ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ನೇಮಕಾತಿ ಆದೇಶ ಕೊಡಬೇಕು’ ಎಂದು ಅಭ್ಯರ್ಥಿಗಳಾದ ಶಿವರಾಜ ಮಾನ್ವಿ, ಕವಿತಾ ಲಿಂಗಸುಗೂರು ಹಾಗೂ ರಮೇಶ ಪೂಜಾರಿ ಮನವಿ ಮಾಡಿದ್ದಾರೆ.
ಬೋಧಕೇತರ ಸಿಬ್ಬಂದಿ ನೇಮಕಾತಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ. ಆದರೂ ಕುಲಪತಿಯವರು ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು. ಆಡಳಿತ ಮಂಡಳಿ ಇದಕ್ಕೆ ಒಪ್ಪಿಗೆ ಕೊಟ್ಟಿಲ್ಲ. ಆದರೆ, ಇದು ನೇಮಕಾತಿಯ ಮೇಲೆ ಪರಿಣಾಮ ಬೀರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದ ವೇತನ ಪಾವತಿ ಮಾಡುವುದು ಕಷ್ಟವಾಗಲಿದೆ. ಅಭ್ಯರ್ಥಿಗಳ ವೇತನವನ್ನು ಎಚ್‌ಆರ್‌ಎಂಎಸ್ ಮೂಲಕ ಕೊಡಲು ಆದೇಶ ಹೊರಡಿರುವಂತೆ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಕೃಷಿ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಸಮಸ್ಯೆ ಶೀಘ್ರ ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಹನುಮಂತಪ್ಪ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.