ADVERTISEMENT

ಯರಗೇರಾದಲ್ಲಿ ಇತಿಹಾಸ ಕುರುಹುಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 12:06 IST
Last Updated 13 ಏಪ್ರಿಲ್ 2019, 12:06 IST
ಯರಗೇರಾ ಗ್ರಾಮದ ತಿಪ್ಪೆಯಲ್ಲಿ ಪತ್ತೆಯಾದ ಜೈನ ಶಾಸನ
ಯರಗೇರಾ ಗ್ರಾಮದ ತಿಪ್ಪೆಯಲ್ಲಿ ಪತ್ತೆಯಾದ ಜೈನ ಶಾಸನ   

ರಾಯಚೂರು: ತಾಲ್ಲೂಕಿನ ಯರಗೇರಾದಲ್ಲಿ ಐತಿಹಾಸಿಕ ಕುರುಹುಗಳನ್ನು ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಪತ್ತೆ ಮಾಡಿದ್ದಾರೆ.

12 ವೀರಗಲ್ಲುಗಳು, ಮೂರು ವೀರ-ಮಹಾಸತಿ ಶಿಲ್ಪಗಳು, ಎರಡು ಚೌಡಮ್ಮ ವಿಗ್ರಹಗಳು, ಮೂರು ಈಶ್ವರ ಲಿಂಗಗಳು, ಎರಡು ವೀರಭದ್ರ ಮೂರ್ತಿಗಳು, ಮಾರುತಿ, ಪೀರಲದೇವರು, ಮಸೀದೆ ಪತ್ತೆಯಾಗಿವೆ.

ಗ್ರಾಮದ ಹನುಮಂತ ವಾಲೀಕಾರರ ಮನೆಯ ಹತ್ತಿರ ತಿಪ್ಪೆಯಲ್ಲಿ ಹೂತು ಹೋಗಿರುವ ಜೈನಶಾಸನವು 50 ಸಾಲುಗಳಿಂದ ರಚಿತವಾಗಿದೆ. ಇದು ಕನ್ನಡ ಭಾಷೆ, ಕನ್ನಡ ಲಿಪಿಯಲ್ಲಿದ್ದು, ಕಪ್ಪು ಶಿಲೆಯಲ್ಲಿದೆ. ಈ ಶಾಸನವು ಕಲ್ಯಾಣ ಚಾಳುಕ್ಯ ಅರಸ ಭೂಲೋಕಮಲ್ಲನ (3ನೇ ಸೋಮೇಶ್ವರ)ದಾಗಿದೆ. ಇದು ಕ್ರಿ.ಶ. 1130 ರ ಕಾಲಕ್ಕೆ ಸೇರುತ್ತಿದ್ದು, ಈತನ ಸಾಮಂತನಾಗಿ ಮಾರಯ್ಯ ನಾಯಕನಿದ್ದನು. ಈತನು ದೇವರ ಸೇವೆಗಾಗಿ 450 ಕಮ್ಮ ಭೂಮಿ, ಎರಡು ಮನೆಯ ನಿವೇಶನ, ಹೂವಿನತೋಟ, ದೇವರ ಅಂಗ ಭೋಗ, ರಂಗಭೋಗ, ಖಂಡಸ್ಪುಟಿತ ಜೀರ್ಣೋದ್ಧಾರ ಮೊದಲಾದವುಗಳಿಗೆ ದತ್ತಿ ನೀಡಿದನು ಎನ್ನುವ ಉಲ್ಲೇಖವಿದೆ.

ADVERTISEMENT

ಹಾಗೆಯೇ ದೇವರ ಸೇವೆಗಾಗಿ, ಕೂಲಿ ಕಾರ್ಮಿಕರಿಗಾಗಿ ದೀಪಗಳನ್ನು ನೀಡಿದನು. ಶಾಸನ ಮುಂದುವರಿದು ಬಸದಿ, ಮೂಲಸಂಘ, ಕಾಣೂರುಗಣ, ಮೇಘಪಾಶಣಗಚ್ಛ ಮತ್ತು ಕೊಂಡ ಕೊಂಡನ್ವಯರ ಉಲ್ಲೇಖದೊಂದಿಗೆ ಎರಂಗೆರೆಯು ಮುದ್ಗುಂದೂರು-300ರ ಬಳಿಯಿತ್ತೆಂಬ ವಿಷಯವಿದೆ.

ಇನ್ನೊಂದು ಶಾಸನವು ಚೌಡಿಕಟ್ಟೆ ಮುಂಬದಿಯ ನೆಟ್ಟ ಕಲ್ಲಿನಲ್ಲಿದ್ದು, ಕ್ರಿ.ಶ. 17ನೇ ಶತಮಾನಕ್ಕೆ ಸೇರುತ್ತದೆ. ಇದರಲ್ಲಿ ಮಲೆನಾಡುಗಂಡ ಯರಗೆರೆ ಎಂದು ತಿಳಿಸುತ್ತದೆ.

ಈ ಶಾಸನಗಳ ಪ್ರತಿಗಳನ್ನು ಸಂಗ್ರಹಿಸುವುದಕ್ಕೆ ಮತ್ತು ಕುರುಹುಗಳ ಶೋಧನೆಯಲ್ಲಿ ಹನುಮಂತ ಗುಂಜಳ್ಳಿ, ಅಜಯ, ಸಣ್ಣ ಚನ್ನಬಸವ ಪಟಕನದೊಡ್ಡಿ, ಮಾರೆಮ್ಮ, ಬಾಲಯ್ಯ, ರಾಮಯ್ಯ ನೆರವಾಗಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.