ADVERTISEMENT

ಬಡ್ಡಿ ರಹಿತ ಸಾಲ ವಿತರಣೆ ಶ್ಲಾಘನೀಯ: ಶಾಸಕ ಜಿ.ಹಂಪಯ್ಯ

ಮಾನ್ವಿ: ದಾರುಸ್ಸಲಾಮ್ ಸೌಹಾರ್ದ ಸಹಕಾರಿ ಸಂಘದ 3ನೇ ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:29 IST
Last Updated 22 ಸೆಪ್ಟೆಂಬರ್ 2025, 6:29 IST
ಮಾನ್ವಿಯಲ್ಲಿ ಭಾನುವಾರ ನಡೆದ ದಾರುಸ್ಸಲಾಮ್ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಶಾಸಕ ಜಿ.ಹಂಪಯ್ಯ ನಾಯಕ ಉದ್ಘಾಟಿಸಿದರು
ಮಾನ್ವಿಯಲ್ಲಿ ಭಾನುವಾರ ನಡೆದ ದಾರುಸ್ಸಲಾಮ್ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಶಾಸಕ ಜಿ.ಹಂಪಯ್ಯ ನಾಯಕ ಉದ್ಘಾಟಿಸಿದರು   

ಮಾನ್ವಿ: ‘ಸಣ್ಣ ವ್ಯಾಪಾರಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ದಾರುಸ್ಸಲಾಮ್ ಸಹಕಾರ ಸಂಘದ ವತಿಯಿಂದ ಬಡ್ಡಿ ರಹಿತ ಸಾಲ ವಿತರಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಶಾಸಕ ಜಿ.ಹಂಪಯ್ಯ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಖುಬಾ ಮಸೀದಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದಾರುಸ್ಸಲಾಮ್ ಸೌಹಾರ್ದ ಸಹಕಾರ ಸಂಘದ 3ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ದಾರುಸ್ಸಲಾಮ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸೈಯದ್ ಅಕ್ಬರ್ ಪಾಷಾ ಹುಸೇನಿ ಮಾತನಾಡಿ,‘ದಾರುಸ್ಸಲಾಮ್ ಸಹಕಾರ ಸಂಘ ಒಟ್ಟು 551 ಸದಸ್ಯರನ್ನು ಹೊಂದಿದೆ. 2024-25ನೇ ಸಾಲಿನಲ್ಲಿ 624 ಸದಸ್ಯರಿಗೆ ಯಾವುದೇ ಶುಲ್ಕ ಪಡೆಯದೆ ಒಟ್ಟು ₹ 1.69 ಕೋಟಿ ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಒಂದು ತಿಂಗಳಿಗೆ ಒಂದು ಕೋಟಿಯವರೆಗೂ ಸಾಲ ನೀಡುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

ADVERTISEMENT

‘2026ರ ಜನವರಿ 18ರಂದು ಮಾನ್ವಿಯಲ್ಲಿ 101 ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಜ.5ರ ಒಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಎ.ಬಾಲಸ್ವಾಮಿ ಕೊಡ್ಲಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲನಗೌಡ ನಕ್ಕುಂದಿ ಹಾಗೂ ಮತ್ತಿತರರು ಮಾತನಾಡಿ ದಾರುಸ್ಸಲಾಮ್ ಸಹಕಾರ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಸ್ಲಿಂ ಸಮುದಾಯದ ಧರ್ಮಗುರು ಮೌಲಾನಾ ಸೈಯದ್ ಹಸನ್ ಜೀಶಾನ್ ಖಾದ್ರಿ, ಸಹಕಾರ ಅಭಿವೃದ್ಧಿ ಅಧಿಕಾರಿ ನಟರಾಜ, ಲೆಕ್ಕ ಪರಿಶೋಧಕ ಎಸ್.ಡಿ.ಪ್ರಸಾದ್, ಮುಖಂಡರಾದ ಮಹ್ಮದ್ ರಫಿ ಸಾಹುಕಾರ, ಅಬ್ದುಲ್ ರೆಹಮಾನ್, ಮುಹಮ್ಮದ್ ಹುಸೇನ್, ಯೂಸೂಫ್ ಖಾನ್, ಖಾಲಿದ್ ಖಾದ್ರಿ, ಮೌಲಾನಾ ಶೇಖ್ ಫರೀದ್ ಉಮ್ರಿ, ಎಸ್.ಎಸ್.ಪಾಷಾ ಬಾಬುಲ್, ಎಂಎಎಚ್ ಮುಖೀಮ್, ಸಂಸ್ಥೆಯ ಸಿಇಒ ಶೇಖ್ ಮೊಹಮ್ಮದ್ ಹುಸೇನ್, ಎಲ್ಲಾ ನಿರ್ದೇಶಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.