ADVERTISEMENT

ಕವಿತಾಳ: 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 7:23 IST
Last Updated 9 ನವೆಂಬರ್ 2025, 7:23 IST
ಕವಿತಾಳದಲ್ಲಿ ಶನಿವಾರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಸಚಿವ ಎನ್.‌ ಎಸ್.‌ ಬೋಸರಾಜು ಮಾತನಾಡಿದರು
ಕವಿತಾಳದಲ್ಲಿ ಶನಿವಾರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಸಚಿವ ಎನ್.‌ ಎಸ್.‌ ಬೋಸರಾಜು ಮಾತನಾಡಿದರು   

ಕವಿತಾಳ: ‘ಅಭಿವೃದ್ದಿ ಕೆಲಸಗಳನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಸ್ಥಳೀಯ ಆಡಳಿತ ಪ್ರಮುಖ ಪಾತ್ರ ವಹಿಸುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಸಚಿವ ಎನ್‌.ಎಸ್.‌ಬೋಸರಾಜು ಹೇಳಿದರು.

ಪಟ್ಟಣದ 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರವನ್ನು₹6.45 ಕೋಟಿ ವೆಚ್ಚದಲ್ಲಿ 50 ಹಾಸಿಗೆಗೆ ಮೇಲ್ದರ್ಜೇಗೇರಿಸಿದ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಮಸ್ಕಿ ಕ್ರಾಸ್‌ನಿಂದ ರೈಸ್‌ ಮಿಲ್‌ವರೆಗೆ ₹90 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸರ್ಕಾರದ ಯಾವುದೇ ಅಭಿವೃದ್ದಿ ಕೆಲಸಗಳಿಗೆ ಸ್ಥಳೀಯರು ಕಾಳಜಿ ವಹಿಸಬೇಕು ಮತ್ತು ಸ್ಥಳೀಯ ಆಡಳಿತ ಮೂಲಸೌಕರ್ಯ ಒದಗಿಸಬೇಕು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚುವರಿ ₹845 ಕೋಟಿ ಅನುದಾನ ನೀಡಲಾಗಿದೆ’ ಎಂದರು.

ADVERTISEMENT

ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, ‘ಸಚಿವ ಎನ್.‌ ಎಸ್.‌ ಬೋಸರಾಜು ಅವರ ಒತ್ತಾಸೆಯಿಂದ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ. ಕೇವಲ ತಾವು ಶಾಸಕರಾಗಿ ಮಾಡಲು ಸಾಧ್ಯವಾಗಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮಾಳಪ್ಪ, ಕಿರಲಿಂಗಪ್ಪ, ಮುಖಂಡರಾದ ಶೇಖರಪ್ಪ ಸಾಹುಕಾರ ಹಟ್ಟಿ, ಲಿಯಾಖತ್‌ ಅಲೀ, ಬೆಂಡಯ್ಯಸ್ವಾಮಿ ಚಿಂಚರಕಿ, ಚುಕ್ಕಿ ಶಿವಕುಮಾರ, ಶರಣಯ್ಯ ನಾಯಕ ಗುಡದಿನ್ನಿ, ವೈ.ಭೂಪನಗೌಡ, ಶರಣಬಸವ ಹಣಿಗಿ, ಚಾಂದಪಾಶಾ, ಒವಣ್ಣ, ಶಿವಣ್ಣ ವಕೀಲ, ಡಿಎಚ್‌ಒ ಡಾ.ಸುರೇಂದ್ರಬಾಬು, ಟಿಎಚ್‌ಒ ಡಾ.ಶರಣಬಸವರಾಜ, ತಹಶೀಲ್ದಾರ್ ಅಶೋಕ ಪವಾರ್ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವರದಿಗಾರ ಅಮರೇಶ ದಿನ್ನಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.