ADVERTISEMENT

ಮಾನವ ಕಳ್ಳ ಸಾಗಣೆ ದೊಡ್ಡ ಜಾಲ: ಯಾಧೀಶ ಬೈಲೂರು ಶಂಕರರಾಮ

ಮಾನವ ಕಳ್ಳ ಸಾಗಣಿಕೆ ತಡೆ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 13:57 IST
Last Updated 13 ಅಕ್ಟೋಬರ್ 2018, 13:57 IST
ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ಮಾನವ ಕಳ್ಳ ಸಾಗಣಿಕೆ ತಡೆ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ ಉದ್ಘಾಟಿಸಿದರು
ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ಮಾನವ ಕಳ್ಳ ಸಾಗಣಿಕೆ ತಡೆ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ ಉದ್ಘಾಟಿಸಿದರು   

ರಾಯಚೂರು: ಮಾನವ ಕಳ್ಳ ಸಾಗಣೆ ಬಹುದೊಡ್ಡ ಜಾಲವಾಗಿದ್ದು, ಮಕ್ಕಳ ಹಾಗೂ ಮಹಿಳೆಯರನ್ನು ಗೌಪ್ಯವಾಗಿ ಸಾಗಿಸಿ ಅವರನ್ನು ನಕಾರಾತ್ಮಕ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ ಹೇಳಿದರು.

ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಬಿಆರ್‌ಬಿ ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೋಲಿಸ್ ಇಲಾಖೆಯಿಂದ ಈಚೆಗೆ ಆಯೋಜಿಸಿದ್ದ ಮಾನವ ಕಳ್ಳ ಸಾಗಣಿಕೆ ತಡೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳಸಾಗಣೆ ತಡೆಯಲು ಪ್ರತಿಯೊಬ್ಬರೂ ಶ್ರಮಿಸಬೇಕು. ಇಂತಹ ಘಟನೆಗಳು ಕಂಡುಬಂದರೆ ತ್ವರಿತವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ADVERTISEMENT

ಕಾನೂನು ಕಾಲೇಜಿನ ಟಿ.ನಾರಾಯಣ ಸ್ವಾಮಿ ಮಾತನಾಡಿ, ಚಿಕ್ಕ ಮಕ್ಕಳನ್ನೂ ಅಪಹರಿಸಿ ಲೈಂಗಿಕ ಶೋಷಣೆಗೆ ಒಳಪಡಿಸಲಾಗುತ್ತಿದ್ದು, ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿಸಲಾಗುತ್ತದೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ನಾಗರಾಜ ಮಾತನಾಡಿ, ಮಾನವ ಕಳ್ಳ ಸಾಗಣೆ ತಡೆಗಟ್ಟುವ ಮೂಲಕ ಉತ್ತಮ ನಾಗರಿಕ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರಬಾಬು ಮಾತನಾಡಿ, ಮಾನವ ಕಳ್ಳ ಸಾಗಣೆ ಗಂಭೀರವಾದ ಸಮಸ್ಯೆಯಾಗಿದ್ದು, ನಿವಾರಣೆ ಮಾಡಲು ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಸಿ.ನಾಡಗೌಡ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಬಿ.ದೇವರೆಡ್ಡಿ ಮತ್ತು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು. ಪಿಎಸ್‌ಐ ಉಮೇಶ ಕಾಂಬ್ಳೆ ವಂದಿಸಿದರು. ವೃತ್ತ ನಿರೀಕ್ಷಕ ಎಂ.ಡಿ.ಫಸಿಯುದ್ದೀನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.