ADVERTISEMENT

ಹಟ್ಟಿ ಚಿನ್ನದ ಗಣಿ ಹೊರಡಿಸಿದ ಪ್ರಕಟಣೆ ಒಪ್ಪುವುದಿಲ್ಲ

ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಡಿ. ಅಮೀರ ಅಲಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 12:35 IST
Last Updated 18 ಜನವರಿ 2019, 12:35 IST
ಎಂ. ಡಿ. ಅಮೀರ ಅಲಿ
ಎಂ. ಡಿ. ಅಮೀರ ಅಲಿ   

ಹಟ್ಟಿ ಚಿನ್ನದ ಗಣಿ: ’ಹಟ್ಟಿ ಚಿನ್ನದ ಗಣಿ ಕಂಪೆನಿಯ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪ್ರಭಾಕರ ಸಂಗೂರ ಮಠ ಅವರು, ಕಾರ್ಮಿಕರ ಮಕ್ಕಳಿಗೆ ನೌಕರಿ ಕೊಡುವ ಬದಲಾಗಿ ಹಣಕಾಸು ಸವಲತ್ತು ಕೊಡುವುದಾಗಿ ಶುಕ್ರವಾರ ಹೊರಡಿಸಿದ್ದ ಪ್ರಕಟಣೆಯನ್ನು ನಾವು ಒಪ್ಪುವುದಿಲ್ಲ’ ಎಂದು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಡಿ. ಅಮೀರ ಅಲಿ ತಿಳಿಸಿದ್ದಾರೆ.

ಜನವರಿ 12ರಂದು ಗಣಿಯ ಉನ್ನತಾಧಿಕಾರಿಗಳು ಹಾಗೂ ಕಾರ್ಮಿಕ ಸಂಘ ಪದಾಧಿಕಾರಿಗಳ ನಡುವೆ ನಡೆದ ಚರ್ಚೆಯಲ್ಲಿ 2018ರ ಜೂನ್‌ 26 ರಂದು ನಡೆದ 406ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ವೈದ್ಯಕೀಯ ಅನರ್ಹತೆ ಆಧಾರವಾಗಿ ಕಾರ್ಮಿಕರನ್ನು ನಿವೃತ್ತಿಗೊಳಿಸಿ ಅವರ ಮಕ್ಕಳಿಗೆ ಗಣಿಯಲ್ಲಿ ಕೆಲಸಕೊಡಲು ನಿರ್ದೇಶಕ ಮಂಡಳಿ ಅನುಮೋದನೆ ನೀಡಿದೆ ಎಂದು ಸಭೆಯ ನಡವಳಿಕೆ ಪ್ರತಿಯನ್ನು ನೀಡಿದ್ದ ಹಿನ್ನೆಲೆಯಲ್ಲಿ ಸಂಘ ಪ್ರಕಟಣೆ ಹೊರಡಿಸಿತ್ತು ಎಂದರು.

ಕಂಪೆನಿಯ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿಕೊಂಡು ಸಾರ್ವಜನಿಕ ಉದ್ದಿಮೆಗಳಲ್ಲಿ ಅನಾರೋಗ್ಯ ಹಾಗೂ ಅಪಘಾತಕ್ಕೆ ಸಿಲುಕಿ ಕೆಲಸ ಮಾಡಲು ಆಗದೆ ಇರುವ ಕಾರ್ಮಿಕರಿಗೆ ಅನುಕಂಪದ ಆಧಾರದ ಮೇರೆಗೆ ಗಣಿಯಲ್ಲಿ ಕೆಲಸ ಒದಗಿಸಬಹುದು ಎಂದು ಶಿಫಾರಸ್ಸು ಮಾಡಿ ನಿರ್ದೇಶಕ ಮಂಡಳಿಗೆ ಅನುಮೋದನೆಗಾಗಿ ವರದಿ ಸಲ್ಲಿಸಿದ್ದು ಸಂಘದ ಗಮನಕ್ಕೆ ಇತ್ತು. ಈ ಕುರಿತು ಸಂಘವು 2018ರ ಏಪ್ರಿಲ್ 3 ರಂದು ಪತ್ರ ಬರೆದು ಅಧಿಕಾರಿಗಳ ಸಮಿತಿಗೆ ಒತ್ತಾಯಿಸಿದೆ ಎಂದು ತಿಳಿಸಿದ್ದಾರೆ.

ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕಂಪೆನಿಯ ನಿರ್ದೇಶಕ ಮಂಡಳಿ ಸದಸ್ಯ ನವಿನ್‌ರಾಜ್‌ ಸಿಂಗ್‌ ಅವರು, ವೈದ್ಯಕೀಯ ಅನರ್ಹತೆ ಆಧಾರದ ನಿವೃತ್ತಿ ಕುರಿತು ಏನು ಟಿಪ್ಪಣೆ ಬರೆದಿದ್ದಾರೆ ಎಂಬುದನ್ನು ಸಂಘಕ್ಕೆ ತಿಳಿಸದೆ ಪ್ರಕಟಣೆ ಹೊರಡಿಸಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನರ್ಹತೆಯ ಆಧಾರದ ಮೇಲೆ ಮಕ್ಕಳಿಗೆ ಗಣಿಯಲ್ಲಿ ನೌಕರಿ ಕೊಡುವ ಬೇಡಿಕೆ ಕಾರ್ಮಿಕ ಸಂಘದ ಹೊಸ ವೇತನ ಒಪ್ಪಂದದ ಬೇಡಿಕೆ ಪತ್ರದಲ್ಲಿ ಇದೆ. ಈ ಬೇಡಿಕೆಯನ್ನು ಈಡೇರಿಸುವವರೆಗೆ ಸಂಘ ಹಿಂದೆ ಸರಿಯುದಿಲ್ಲ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.