ಮುದಗಲ್: ‘ನಾನು ಮೂರು ಬಾರಿ ಕ್ಷೇತ್ರದ ಶಾಸಕನಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ’ ಎಂದು ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ ಡಿ.ವಜ್ಜಲ್ ಹೇಳಿದರು.
ಸಮೀಪದ ಚಿಕ್ಕ ಲೆಕ್ಕಿಹಾಳ ಗ್ರಾಮದಲ್ಲಿ ₹50 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ, ಹಿರೇ ಲೆಕ್ಕಿಹಾಳ ಗ್ರಾಮದಲ್ಲಿ ₹50 ಲಕ್ಷ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ, ₹1 ಕೋಟಿ ವೆಚ್ಚದ ಲೆಕ್ಕಿಹಾಳ-ಸಜ್ಜಲಗುಡ್ಡ ರಸ್ತೆಯಲ್ಲಿನ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಕ್ಷೇತ್ರದ 80 ಗ್ರಾಮಗಳಲ್ಲಿ ತಲಾ ₹50 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಹೈಮಾಸ್ಟ್ ದೀಪ ಅಳವಡಿಸುವ ಕಾಮಗಾರಿ ತಾಂತ್ರಿಕ ತೊಂದರೆಯಿಂದ ನನೆಗುದಿಗೆ ಬಿದ್ದಿದೆ. ಎರಡು ವರ್ಷಗಳಿಂದ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ ಎನ್ನುವ ವಿರೋಧ ಪಕ್ಷದವರ ಹೇಳಿಕೆ ಹಾಸ್ಯಾಸ್ಪದ. ಯಾರೂ ಏನೇ ಹೇಳಲಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ. ಹಿಂದಿನ ಶಾಸಕರು ಅಭಿವೃದ್ಧಿ ಮಾಡದೆ ದೋಚಿಕೊಂಡು ಹೋಗಿದ್ದಾರೆ. ಕುಡಿಯುವ ನೀರಿಗಾಗಿ ಆರ್.ಒ ಪ್ಲಾಂಟ್ ಮಾಡುತ್ತಿದ್ದೇವೆ. ಪ್ರತಿ ಹಳ್ಳಿಗಳಲ್ಲಿ ಸಮಸ್ಯೆ ಇರದಂತೆ ಮಾಡುತ್ತೇನೆ’ ಎಂದರು.
‘ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿಗಳಿಗೆ ಅನುದಾನ ಇಲ್ಲದಂತಾಗಿದೆ. ಲೆಕ್ಕಿಹಾಳ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ₹10 ಲಕ್ಷ ಅನುದಾನ ನೀಡುತ್ತೇನೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಗೌಂಡಿ, ವಿರೂಪಾಕ್ಷಪ್ಪ ಸಾಹುಕಾರ, ಪುರಸಭೆ ಸದಸ್ಯ ಮುದಕಪ್ಪ ನಾಯಕ, ಹನುಮಂತಪ್ಪ ಕಂದಗಲ್ಲ, ವೀರನಗೌಡ ಲಕ್ಕಿಹಾಳ, ಶರಣಯ್ಯ ಸ್ವಾಮಿ, ವೆಂಕನಗೌಡ ಐದನಾಳ, ಲಕ್ಷ್ಮಣ ಹಾಗೂ ಎಇಇ ಹನುಮಂತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.