ADVERTISEMENT

ರಾಯಚೂರು: ಒಳ ಮೀಸಲಾತಿ ಜಾರಿ, ಸ್ವಾಗತಿಸಿ ಮಾದಿಗರ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:40 IST
Last Updated 23 ಆಗಸ್ಟ್ 2025, 4:40 IST
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಒಳ ಮೀಸಲಾತಿ ಜಾರಿ ಸ್ವಾಗತಿಸಿ ಮಾದಿಗ ಸಮುದಾಯವರು ಬೃಹತ್ ರ್‍ಯಾಲಿ ನಡೆಸಿದರು
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಒಳ ಮೀಸಲಾತಿ ಜಾರಿ ಸ್ವಾಗತಿಸಿ ಮಾದಿಗ ಸಮುದಾಯವರು ಬೃಹತ್ ರ್‍ಯಾಲಿ ನಡೆಸಿದರು   

ರಾಯಚೂರು: ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಸ್ವಾಗತಿಸಿ ದಲಿತಪರ ಸಂಘಟನೆಗಳು ನಗರದಲ್ಲಿ ಶುಕ್ರವಾರ ಬೃಹತ್‌ ರ್‍ಯಾಲಿ ನಡೆಸಿದವು.

ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಹರಿಜನವಾಡದಿಂದ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಡಾ.ಬಿ.ಆರ್‌.ಅಂಬೇಡ್ಕರ್ ಹಾಗೂ ರೈಲು ನಿಲ್ದಾಣ ಸಮೀಪದ ಬಾಬು ಜಗಜೀವನರಾಂ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿ ವಿಜಯೋತ್ಸವ ಆಚರಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ‘ಒಳ ಮೀಸಲಾತಿ ಜಾರಿಗಾಗಿ ಸುದೀರ್ಘ ಹೋರಾಟ ನಡೆಸಲಾಗಿದೆ. ನಿರೀಕ್ಷೆಗೆ ತಕ್ಕಂತೆ ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ. ಮಾದಿಗ ಸಮುದಾಯಕ್ಕೆ ಶೇ 7ರಷ್ಟು ಮೀಸಲಾತಿ ಕೊಡಬೇಕಾಗಿತ್ತು. ಆದರೆ, ಶೇ 6ರಷ್ಟು ಮೀಸಲಾತಿ ಕೊಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ನಾಗಮೋಹನ ದಾಸ್‌ ಅವರ ವರದಿ ಕಡೆಗಣಿಸಿ ಮೂರು ವರ್ಗಗಳನ್ನಾಗಿ ಮಾಡಲಾಗಿದೆ. ಮಾದಿಗರಿಗೆ ಶೇಕಡ 1ರಷ್ಟು ಮೀಸಲಾತಿ ಪ್ರಮಾಣ ಕಡಿಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಕ್ಕು ಪಡೆಯಲು ಹೋರಾಟ ಮುಂದುವರಿಸಲಾಗುವುದು’ ಎಂದು ಹೇಳಿದರು.

ಆರ್‌ಡಿಎ ಸದಸ್ಯ ನರಸಿಂಹಲು ಮಾಡಗಿರಿ ಮಾತನಾಡಿ, ‘ಮಾದಿಗ ದಂಡೋರಾ, ಮಾದಿಗ ಮೀಸಲಾತಿ ಹೋರಾಟ ಸಮಿತಿ 39 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ನಾಗಮೋಹನ ದಾಸ್‌ ವರದಿ ಆಧರಿಸಿ ರಾಜ್ಯ ಸರ್ಕಾರ ಮೂರು ಗುಂಪುಗಳನ್ನಾಗಿ ಮಾಡಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗಿದೆ. ಸಂಧಾನ ಸೂತ್ರ ಅನುಸರಿಸಿ ಒಳ ಮೀಸಲಾತಿ ಜಾರಿಗೆ ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು’ ಎಂದರು.

ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಸಿಹಿ ವಿತರಣೆ ಮಾಡಲಾಯಿತು.

ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಎಸ್‌.ಮಾರೆಪ್ಪ, ಮಹಾನಗರ‍ ಪಾಲಿಕೆ ಸದಸ್ಯರಾದ ಎಂ.ಪವನಕುಮಾರ, ನರಸರೆಡ್ಡಿ, ಹೇಮರಾಜ ಅಸ್ಕಿಹಾಳ, ಆಂಜನೇಯ ಕುರಬದೊಡ್ಡಿ, ರೆಡ್ಡಿ ತಿಮ್ಮಪ್ಪ, ಎಂ.ಆರ್‌.ಬೇರಿ, ಬೂದೆಪ್ಪ, ಪಿ.ಅಮರೇಶ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.