ADVERTISEMENT

ನಿಯಮಬಾಹಿರ ಟೆಂಡರ್‌: ಪಿಡಬ್ಲ್ಯೂಡಿ ಅಧಿಕಾರಿ ವಿರುದ್ಧ ಗರಂ

ಮೊದಲ ದಿನವೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬೋಜರಾಜು

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 12:43 IST
Last Updated 6 ಜೂನ್ 2023, 12:43 IST

ರಾಯಚೂರು: ರಾಯಚೂರು ವಿಮಾನ ನಿಲ್ದಾಣದಲ್ಲಿನ ಅತಿಕ್ರಮಣ ತೆರವುಗೊಳಿಸದೇ, ಅಗತ್ಯವಿರುವಷ್ಟು ಜಮೀನನ್ನೂ ಸ್ವಾಧೀನ ಪಡಿಸಿಕೊಳ್ಳದೇ ₹ 180 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ಕರೆದಿರುವುದನ್ನು ಪ್ರಸ್ತಾಪಿಸಿ ಸಣ್ಣ ನೀರವಾರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳ ಬೆವರಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮೊನಚಾದ ಮಾತುಗಳಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಮಾನ ನಿಲ್ದಾಣಕ್ಕೆ 320 ಎಕರೆ ಜಾಗ ಅಗತ್ಯವಿದೆ. ಅಲ್ಲಿರುವುದು ಕೇವಲ 300 ಎಕರೆ ಸರ್ಕಾರಿ ಜಾಗ. ಇನ್ನೂ 20 ಎಕರೆ ಜಾಗ ಬೇಕು. ನಿಯಮ ಪಾಲಿಸದೇ ಕಾಮಗಾರಿ ಕೈಗೊಂಡರೆ ಜನರು ಹಣ ಪೋಲಾಗುವುದಿಲ್ಲವೆ? ನಿಯಮ ಗಾಳಿಗೆ ತೂರಿ ಟೆಂಡರ್‌ ಕರೆಯಲು ನಿಮಗೆ ಆದೇಶ ನೀಡಿದ್ದು ಯಾರು ಎಂದು ಲೋಕೋಪಯೋಗಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

ಹೊಸ ಸರ್ಕಾರ ಬರುವ ಮೊದಲು ಅಧಿಕಾರಿಗಳು ಸಭೆ ನಡೆಸಿ ಅತಿಕ್ರಮಣ ತೆರವುಗೊಳಿಸಿ ಲೋಕೋಪಯೋಗಿ ಇಲಾಖೆಗೆ ಜಾಗ ಒಪ್ಪಿಸುವ ಭರವಸೆ ನೀಡಲಾಗಿದೆ. ಕಾಮಗಾರಿಗೆ ಅಗತ್ಯವಿರುವಷ್ಟು ಜಾಗ ಇಲಾಖೆ ಹೆಸರಿನಲ್ಲೇ ಇದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಬಹಳ ಒತ್ತಡ ಇತ್ತು. ಹೀಗಾಗಿ ಟೆಂಡರ್ ಕರೆಯಬೇಕಾಯಿತು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ ಚೌಹಾಣ ಮಾತನಾಡಿ, ‘ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿ 150 ಕಟ್ಟಡಗಳನ್ನು ನಿರ್ಮಿಸಲಾಗಿದೆ. 60 ವರ್ಷಗಳಿಂದ ಜನ ಅಲ್ಲಿ ವಾಸವಾಗಿದ್ದಾರೆ. ಅತಿಕ್ರಮಣ ತೆರವು ಕಷ್ಟವಾಗಲಿದೆ. ಈಗಾಗಲೇ ಒಂದು ಹಂತದ ಸಭೆ ನಡೆಸಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಯಾವುದೇ ಕಾಮಗಾರಿ ಇದ್ದರೂ ನಿಯಮಾವಳಿಗಳ ಪ್ರಕಾರ ನಡೆಯಬೇಕು. ಒಮ್ಮೆ ಕಾಮಗಾರಿ ಆರಂಭವಾದ ಮೇಲೆ ಅದರ ಸುತ್ತ ವಿವಾದ ಸುತ್ತಿಕೊಳ್ಳಬಾರದು. ಅಂತಹದಕ್ಕೆ ದಾರಿ ಮಾಡಿ ಕೊಡಬಾರದು’ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ನಾನು ಈಚೆಗಷ್ಟೇ ಹೊಸದಾಗಿ ಬಂದಿದ್ದೇನೆ’ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು ‘ನಾನು ಹೊಸದಾಗಿಯೇ ಬಂದಿದ್ದೇನೆ. ಆದರೆ, ಎಲ್ಲವೂ ನಿಯಮ ಬದ್ಧವಾಗಿಯೇ ನಡೆಯಬೇಕು’ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಸರಿಯಾಗಿ ನಡೆಯಬೇಕು. ಗುಣಮಟ್ಟದ ಕಾಮಗಾರಿ ನಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.