ಜಾಲಹಳ್ಳಿ: ಬಿಡಾಡಿ ದನಗಳನ್ನು ತಕ್ಷಣವೇ ಮಾಲೀಕರು ಕಟ್ಟಿ ಹಾಕಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ವತಿಯಿಂದ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಪಿಡಿಒ ನರಸಪ್ಪ ಆಶಾಪುರ ಮಾತನಾಡಿ,‘ಪಟ್ಟಣದಲ್ಲಿ ದಿನೇ ದಿನೇ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದೆ. ದನಗಳನ್ನು ಕೊಂಡವಾಡಿಗೆ ಹಾಕಲಾಗಿತ್ತು. ಅವುಗಳ ಮಾಲೀಕರು ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಬೀದಿಗೆ ಬಿಡುವುದಿಲ್ಲ ಎಂದು ತಿಳಿಸಿದ ಕಾರಣ ಬಿಟ್ಟು ಕಳುಹಿಸಲಾಗಿತ್ತು. ಮರಳಿ ಅದೇ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ದನಗಳು ಮುಖ್ಯ ರಸ್ತೆಯಲ್ಲಿ ಹಿಂಡು ಹಿಂಡಾಗಿ ಸೇರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಪಟ್ಟಣದ ಬೀದಿಗಳಲ್ಲಿ ಕೂಡ ದನಗಳ ಹಾವಳಿ ಹೆಚ್ಚಾಗಿದೆ.
ಮಕ್ಕಳು ಹಾಗೂ ವೃದ್ದರು ಮನೆಯಿಂದ ಹೊರಗೆ ಬಾರದಂತಾಗಿದೆ. ಆದ್ದರಿಂದ ಈ ಬಾರಿ ಬಿಡಾಡಿ ದನಗಳನ್ನು ಬಿಡದೇ ರಾಯಚೂರು ಗೋ ಶಾಲೆಗೆ ಸಾಗಿಸಲಾಗುವುದು. ಅಲ್ಲಿಯೂ ಯಾವುದೇ ಕಾರಣಕ್ಕೂ ಮಾಲೀಕರಿಗೆ ಮರಳಿ ನೀಡುವುದಿಲ್ಲ’ ಎಂದು ಹೇಳಿದರು.
‘ಪಟ್ಟಣದ ಸಾರ್ವಜನಿಕರಿಗೆ ಆಟೊದಲ್ಲಿ ಧ್ವನಿ ವರ್ಧಕದ ಮೂಲಕ ತಿಳಿಸಲಾಗುತ್ತಿದೆ’ ಎಂದರು.
ಪೊಲೀಸ್ ಸಿಬ್ಬಂದಿ ಜಿಂದಾವಲಿ ಸಾಬ್, ಗ್ರಾ.ಪಂ ಸಿಬ್ಬಂದಿ ಕಾಶಿನಾಥ, ಮುದ ರಂಗಪ್ಪ ನಾಯಕ ಹಾಗೂ ಗೋವಿಂದಪ್ಪ ಬಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.