ADVERTISEMENT

ರಾಯಚೂರು ಗಡಿ ಜನಗಳ ನುಡಿಯಾಗದ ಕನ್ನಡ!

ಕುಂದು ಕೊರತೆಯಿಂದ ಕೂಡಿದ ಕನ್ನಡ ಮಾಧ್ಯಮ ಶಾಲೆಗಳು

ನಾಗರಾಜ ಚಿನಗುಂಡಿ
Published 1 ನವೆಂಬರ್ 2020, 1:26 IST
Last Updated 1 ನವೆಂಬರ್ 2020, 1:26 IST
   
""

ರಾಯಚೂರು: ಕರ್ನಾಟಕದ ಅವಿಭಾಜ್ಯ ಭಾಗವಾಗಿರುವ ರಾಯಚೂರು ಜಿಲ್ಲೆಯ ಅನೇಕ ಗಡಿ ಗ್ರಾಮಗಳಲ್ಲಿ ಈಗಲೂ ಜನರ ಆಡುಭಾಷೆ ತೆಲುಗು!

ಜಿಲ್ಲಾ ಕೇಂದ್ರ ರಾಯಚೂರು ನಗರದಲ್ಲಿ ಕೂಡಾ ಕನ್ನಡ ಶೋಚನೀಯ ಸ್ಥಿತಿಯಲ್ಲಿದೆ. ಜನರು ಯಾವ ಭಾಷೆಯಲ್ಲಿ ಸಂಭಾಷಿಸುತ್ತಾರೆ ಎಂಬುದನ್ನು ತಿಳಿಯಲು, ಒಮ್ಮೆ ನಗರವನ್ನು ಸುತ್ತಾಡಿದರೆ ಸಾಕು; ಕನ್ನಡಕ್ಕಿಂತಲೂ ತೆಲುಗು ಭಾಷಾ ಶಬ್ದಗಳೆ ಕಿವಿಗೆ ಹೆಚ್ಚಾಗಿ ಕೇಳಿಸುತ್ತವೆ.

ರಾಯಚೂರು ತಾಲ್ಲೂಕಿನ ಚಂದ್ರಬಂಡಾ, ಯಾಪಲದಿನ್ನಿ, ಯರಗೇರಾ, ಗಿಲ್ಲೇಸುಗೂರು ಹೋಬಳಿಗಳುದ್ದಕ್ಕೂ ತೆಲುಗು ಹಾಸುಹೊಕ್ಕಾಗಿದೆ. ಗ್ರಾಮ ಪಂಚಾಯಿತಿಗಳು, ಬ್ಯಾಂಕ್‌ ಶಾಖೆಗಳು, ಸರ್ಕಾರಿ ಶಾಲೆಗಳು, ಪೊಲೀಸ್‌ ಸ್ಟೇಷನ್‌, ರೈತ ಸಂಪರ್ಕ ಕೇಂದ್ರಗಳು, ಅಂಗನವಾಡಿಗಳು, ಸರ್ಕಾರಿ ಆಸ್ಪತ್ರೆಗಳು, ಎಪಿಎಂಸಿ ಸೇರಿದಂತೆ ಸಾರ್ವಜನಿಕರು ಜಮಾಯಿಸುವ ಯಾವುದೇ ಸ್ಥಳಕ್ಕೆ ಹೋದರೂ ತೆಲುಗು ಭಾಷೆಯಲ್ಲಿಯೇ ಪರಸ್ಪರ ಜನರು ಸಂಭಾಷಿಸುವುದನ್ನು ಸಾಮಾನ್ಯವಾಗಿ ಕಾಣಬಹುದು. ತೆಲುಗು ಗೊತ್ತಿಲ್ಲದ ಜನರೊಂದಿಗೆ ಮಾತ್ರ ಅನಿವಾರ್ಯವಾಗಿ ಕನ್ನಡದಲ್ಲಿ ಸಂಭಾಷಣೆ ಮಾಡುತ್ತಾರೆ.

ADVERTISEMENT

ಹೋಟೆಲ್‌ಗಳು, ಕಿರಾಣಿ ಅಂಗಡಿಗಳು, ಚಿಲ್ಲರೆ ವಹಿವಾಟಿನ ತರಕಾರಿ ಮಾರ್ಕೆಟ್‌, ಶಾಪಿಂಗ್‌ ಮಾಲ್‌, ಬಸ್‌ ನಿಲ್ದಾಣ, ಸಿನಿಮಾ ಮಂದಿರಗಳು, ಖಾಸಗಿ ಆಸ್ಪತ್ರೆಗಳಲ್ಲಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳನ್ನಾಡುತ್ತಾ ನಿಂತಿರುವ ಜನರನ್ನು ಕಾಣಬಹುದು. ರಾಯಚೂರು ತಾಲ್ಲೂಕಿನಲ್ಲಿ ಶೇ 70 ರಷ್ಟು ಜನರು ಕನ್ನಡ–ತೆಲುಗು ಎರಡೂ ಭಾಷೆಗಳನ್ನು ಬಲ್ಲವರಿದ್ದಾರೆ. ಶೇ 30 ರಷ್ಟು ಜನರಿಗೆ ತೆಲುಗು ಮಾತ್ರ ಗೊತ್ತು.

ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕುಗಳ ಕೆಲವು ಗ್ರಾಮಗಳಲ್ಲಿಯೂ ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಜನರು ಸಂಭಾಷಿಸುತ್ತಾರೆ. ರಾಯಚೂರು ತಾಲ್ಲೂಕಿನ ಇಡಪನೂರು, ತಲಮಾರಿ, ಮಿಡಗಲ್‌ದಿನ್ನಿ, ಪುಚ್ಚಲದಿನ್ನಿ, ಆತ್ಕೂರು, ಡಿ.ರಾಂಪೂರ, ಬೂರ್ದಿಪಾಡದಂತಹ ಕೆಲವು ಗ್ರಾಮಗಳಲ್ಲಿ ಅನೇಕ ಜನರಿಗೆ ಕನ್ನಡ ಭಾಷಾ ಜ್ಞಾನವಿಲ್ಲ. ಕೃಷಿ ಕೂಲಿಕಾರ್ಮಿಕರು, ಅಕ್ಷರ ಜ್ಞಾನದಿಂದ ದೂರ ಉಳಿದಿರುವ ಬಡ ಕುಟುಂಬಗಳು ಮೊದಲಿನಿಂದಲೂ ತೆಲುಗು ಭಾಷೆಯಲ್ಲೇ ಉಳಿದಿದ್ದಾರೆ. ಗಡಿಗ್ರಾಮಗಳಲ್ಲಿ ಇನ್ನೂ ಕನ್ನಡ ಕಲಿಕೆಯು ಬೇರುಮಟ್ಟಕ್ಕೆ ತಲುಪಿಲ್ಲ.

ಗಡಿಗ್ರಾಮಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿವೆ. ಆದರೆ, ಶಿಕ್ಷಕರ ಕೊರತೆ ಹಾಗೂ ಶಿಕ್ಷಣಕ್ಕೆ ಪೂರಕವಾಗುವ ಸೌಲಭ್ಯಗಳ ಕೊರತೆ ಇದೆ. ತೆಲುಗು ಸಂಭಾಷಣೆಯೊಂದಿಗೆ ಮಕ್ಕಳಿಗೆ ಶಿಕ್ಷಕರು ಕನ್ನಡ ಭಾಷೆ ಪಾಠ ಹೇಳಿಕೊಡುವ ಅನಿವಾರ್ಯತೆ ಇದೆ.

*********

ಗಡಿಭಾಗದ ಜನರ ಒಡನಾಟ ನೆರೆಯ ರಾಜ್ಯಗಳೊಂದಿಗೆ ಹೆಚ್ಚಾಗಿದೆ. ಶಾಲೆಗಳಲ್ಲಿ ಕನ್ನಡ ಕಲಿಸುವ ಶಿಕ್ಷಕರ ಕೊರತೆ ಇದೆ. ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಇಲ್ಲದ ಕಾರಣದಿಂದಲೇ ಅಲ್ಲಿ ಕನ್ನಡ ಆಡುಭಾಷೆ ಆಗುತ್ತಿಲ್ಲ. ಇದಕ್ಕೆಲ್ಲ ಸರ್ಕಾರದ ಧೋರಣೆ ಕಾರಣ.

-ಹಫೀಜುಲ್ಲಾ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.