ಲಿಂಗಸುಗೂರು: ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ 6,159 ವಿದ್ಯಾರ್ಥಿಗಳಲ್ಲಿ 2,979 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ.
ತಾಲ್ಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ, ವಿವಿಧ ವಸತಿ ಶಾಲೆಗಳು ಸೇರಿ ಒಟ್ಟು 103 ಪ್ರೌಢಶಾಲೆಗಳಿವೆ. ಈ ಸಾಲಿನ ಫಲಿತಾಂಶ ಶೇ 48.36 ಆಗಿದೆ. 2024ರಲ್ಲಿ ಶೇ 58ರಷ್ಟು ಫಲಿತಾಂಶ ಬಂದಿತ್ತು. ಕಳೆದ ವರ್ಷಕ್ಕಿಂತ ಶೇ 10ರಷ್ಟು ಫಲಿತಾಂಶ ಕಡಿಮೆ ಬಂದಿದೆ.
ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ 129 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಫಲಿತಾಂಶ ಮಟ್ಟ ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡರೂ ಕಳೆದ ವರ್ಷಕ್ಕಿಂತ ಕಡಿಮೆ ಬಂದಿದೆ.
ತಾಲ್ಲೂಕಿನ ಅಡವಿಭಾವಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಆ್ಯಂಗ್ಲಿಸ್ಟ್ ಪ್ರೌಢಶಾಲೆಗಳಿಗೆ ಶೇ 100ಕ್ಕೆ 100 ಫಲಿತಾಂಶ ಬಂದಿದೆ. ಪಟ್ಟಣದ ಸಿದ್ಧರಾಮೇಶ್ವರ ಪ್ರೌಢಶಾಲೆ ಹಾಗೂ ಮುದಗಲ್ ಪಟ್ಟಣದ ಮದರ್ ತೆರೆಸಾ ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ಬಂದಿವೆ.
ಶ್ರೇಯಾ ತಾಲ್ಲೂಕಿಗೆ ಪ್ರಥಮ: ಅಡವಿಭಾವಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಸೋಮಲೆಪ್ಪ ಶೇ 99.52 ಅಂಕ ಗಳಿಸುವ ಮೂಲಕ ಜಿಲ್ಲೆಗೆ ದ್ವಿತೀಯ ಹಾಗೂ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಆದರ್ಶ ವಿದ್ಯಾಲಯದ ಅಜಯಕುಮಾರ 620 ಅಂಕ ಗಳಿಸಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಮನಿತ್ ಅರ್ಕಸಾಲಿ, ಅಡವಿಭಾವಿ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಶ್ರೀದೇವಿ ಶಿವರಾಜ ತಲಾ 619 ಅಂಕ ಗಳಿಸುವ ಮೂಲಕ ತಾಲ್ಲೂಕಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.