ಕವಿತಾಳ: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸೌಕರ್ಯಗಳ ಕೊರತೆ ಜತೆ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ವೈಯಕ್ತಿಕ ಸೌಲಭ್ಯಗಳೂ ಮರೀಚಿಕೆಯಾಗಿವೆ.
2019-20ನೇ ಸಾಲಿನಲ್ಲಿ ಅಂದಾಜು ₹14 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ಮತ್ತು ವಸತಿ ನಿಲಯ ನಿರ್ಮಿಸಲಾಗಿದೆ. ಬೆಂಚು, ಮಂಚ ಇಲ್ಲದೇ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬೇಕು. ನೆಲದ ಮೇಲೆಯೇ ಮಲಗಬೇಕಾದ ಅನಿವಾರ್ಯತೆ ಇದೆ.
1 ರಿಂದ 10ನೇ ತರಗತಿಯ ವರೆಗೆ 250 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಎರಡು ಕೊಳವೆಬಾವಿ ಇದ್ದರೂ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಪಂಚಾಯಿತಿ ವತಿಯಿಂದ ಕೆರೆ ನೀರು ಪೂರೈಕೆಯಲ್ಲಿ ಸತತ ವ್ಯತ್ತಯವಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಶೌಚಾಲಯ ಬಳಕೆಗೆ ಮತ್ತು ಸ್ನಾನ ಮಾಡಲು ನೀರಿನ ಕೊರತೆ ಎದುರಾಗಿದೆ.
ಬೆಂಚುಗಳ ಕೊರತೆಯಿಂದ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಾರೆ. ಮಂಚಗಳಿಲ್ಲದೇ ನೆಲದ ಮೇಲೆ ಮಲಗುತ್ತಾರೆ. ಹಾಸಿಗೆ, ದಿಂಬು, ಹೊದಿಕೆ ಪೂರೈಸದ ಕಾರಣ ಅವುಗಳನ್ನು ಮನೆಯಿಂದಲೇ ತರಬೇಕಿದೆ. ಮೇಲಿನ ಮಹಡಿಗೆ ನಿರ್ಮಿಸಿದ ತಡೆ ಗೋಡೆ ಕಿರಿದಾಗಿದ್ದು ಸ್ವಲ್ಪ ಆಯ ತಪ್ಪಿದರೂ ಕೆಳಕ್ಕೆ ಬೀಳುವ ಭಯದಲ್ಲಿ ಮಕ್ಕಳು ಓಡಾಡುವಂತಾಗಿದೆ.
ಮಂಜೂರಾದ 13 ಜನ ಶಿಕ್ಷಕ ಹುದ್ದೆಗಳಲ್ಲಿ 9 ಜನ ಕಾಯಂ ಶಿಕ್ಷಕರಿದ್ದು ನಾಲ್ವರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಸಮಾಜ ವಿಜ್ಞಾನ ಶಿಕ್ಷಕರ ಕೊರತೆ ಇದೆ ಎನ್ನುತ್ತಾರೆ ಮಕ್ಕಳು.
’ಕಾಂಪೌಂಡ್ ಕಿರಿದಾಗಿದ್ದು ಶಿಕ್ಷಕರ ಕಣ್ತಪ್ಪಿಸಿ ಮಕ್ಕಳು ಜಿಗಿದು ಆಚೆ ಹೋಗುತ್ತಾರೆ. ಕಾಂಪೌಂಡ್ ಎತ್ತರಿಸಬೇಕು ಮತ್ತು ಮೇಲಿನ ಮಹಡಿಯ ತಡೆ ಗೋಡೆ ಮೇಲೆ ಗ್ರಿಲ್ಸ್ ಅಳವಡಿಸಬೇಕು, ಹೊಸದಾಗಿ ಒಂದು ಕೊಳವೆಬಾವಿ ಕೊರೆಯಿಸುವ ತುರ್ತು ಅಗತ್ಯವಿದೆ’
ಅಂದಪ್ಪ, ಮುಖ್ಯ ಶಿಕ್ಷಕ
ಇಲ್ಲಿ ಬಹುತೇಕ ಬಡ ಮಕ್ಕಳು ಅಭ್ಯಾಸ ಮಾಡುತ್ತಿದ್ದು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸರ್ಕಾರ ಒದಗಿಸಿ ಕೊಡಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕು
ಮೌನೇಶ ಹಿರೇಕುರಬರು, ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.