ADVERTISEMENT

ಲಿಂಗಸುಗೂರು: 24 ಗಂಟೆಯೊಳಗೆ ಅಪಹೃತ ಯುವಕನ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 18:57 IST
Last Updated 17 ನವೆಂಬರ್ 2019, 18:57 IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಶನಿವಾರ ಜನದಟ್ಟಣೆ ಸ್ಥಳದಿಂದ ಅಪಹರಿಸಲಾಗಿದ್ದ ಯುವಕನನ್ನು ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ಮಾಡಿ ರಕ್ಷಿಸಿದ್ದು, ಐದು ಮಂದಿ ಆರೋಪಿಗಳನ್ನು ಮಾರಕಾಸ್ತ್ರ ಸಮೇತ ಬಂಧಿಸಿ ರಾಯಚೂರಿಗೆ ಭಾನುವಾರ ಕರೆತಂದಿದ್ದಾರೆ.

ಲಿಂಗಸುಗೂರು ತಾಲ್ಲೂಕು ಮಾರಲದಿನ್ನಿ ತಾಂಡಾದ ಯುವಕ ಶರಣ ಕುಮಾರ್ ಅಪಹರಣವಾಗಿದ್ದ. ಅಪಹರಣಕಾರರು ವಿಜಯಪುರ ಜಿಲ್ಲೆ ಚಂದಕವಟೆ ಗ್ರಾಮದವರು. ಚಾಂದಸಾಬ ಇಸ್ಮಾಯಿಲ್ ಮುಲ್ಲಾ, ರಮೇಶ ಶಿವಣ್ಣ, ಮಿರಾಜ್ ಬಾಬಸಾಬ್, ಸಂತೋಷ ಭೀಮಣ್ಣ ಹಾಗೂ ಶಬ್ಬೀರ್ ಇಸ್ಮಾಯಿಲ್ ಸಾಬ್ ಬಂಧಿತ ಆರೋಪಿಗಳು.

ಬಂಧಿತರಿಂದ ಕಾರು, ಮೊಬೈಲ್, ಪಿಸ್ತೂಲ್ ಹಾಗೂ ಕಬ್ಬಿಣದ ರಾಡು ಜಪ್ತಿ ಮಾಡಿಕೊಳ್ಳಲಾಗಿದೆ. ಶರಣಕುಮಾರ್ ಸಹೋದರ ಕೃಷ್ಣಪ್ಪ ಅವರು ಆರೋಪಿಗಳಿಂದ ಕಬ್ಬು ಕಟಾವು ಮಾಡಿಕೊಡುವ ವಾಗ್ದಾನ ನೀಡಿ ಮುಂಗಡ ಪಡೆದಿದ್ದ. ಆದರೆ, ಕಟಾವು ಕಾರ್ಯಕ್ಕೆ ಹೋಗದೆ ಕೈ ಕೊಟ್ಟಿದ್ದರಿಂದ ಆರೋಪಿಗಳು ಗುಂಪು ಮಾಡಿಕೊಂಡು ಬಂದು ಅಪಹರಣ ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.