ADVERTISEMENT

ಹೋಟೆಲ್‌ ವಹಿವಾಟು ಸ್ಥಗಿತ: ಕೆಎಂಎಫ್‌ ಹಾಲು ಮಾರಾಟ ಇಳಿಮುಖ

ನಾಗರಾಜ ಚಿನಗುಂಡಿ
Published 12 ಮೇ 2021, 19:30 IST
Last Updated 12 ಮೇ 2021, 19:30 IST
ರಾಯಚೂರಿನ ಎಲ್‌ವಿಡಿ ಮಾರ್ಗದ ನಂದಿನಿ ಪಾರ್ಲರ್‌
ರಾಯಚೂರಿನ ಎಲ್‌ವಿಡಿ ಮಾರ್ಗದ ನಂದಿನಿ ಪಾರ್ಲರ್‌   

ರಾಯಚೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಅಡಿಯಲ್ಲಿ ಕಾರ್ಯನಿರ್ವಹಿಸುವ ‘ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟ’ದಿಂದ ಪ್ರತಿದಿನ ಮಾರಾಟವಾಗುತ್ತಿದ್ದ ಹಾಲಿನ ಪ್ರಮಾಣವು ಲಾಕ್‌ಡೌನ್‌ ಕಾರಣದಿಂದ ಇಳಿಮುಖವಾಗುತ್ತಿದೆ.

ಹೋಟೆಲ್‌ ಮತ್ತು ಬೇಕರಿ ವಹಿವಾಟು ಸ್ಥಗಿತವಾಗಿರುವುದು ಪರೋಕ್ಷವಾಗಿ ಹಾಲಿನ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಮೇ 10 ರಿಂದ ಲಾಕ್‌ಡೌನ್‌ ಬಿಗಿ ಜಾರಿ ಮಾಡಿದ್ದರಿಂದ ಬಹಳಷ್ಟು ಹೋಟೆಲ್‌ ಹಾಗೂ ರೆಸ್ಟೆರೆಂಟ್‌ಗಳು ಪಾರ್ಸಲ್‌ ನೀಡುವುದನ್ನು ಸ್ವಯಂ ಸ್ಥಗಿತ ಮಾಡುವ ಅನಿವಾರ್ಯತೆ ಎದುರಾಯಿತು. ಪಾರ್ಸಲ್‌ ಪಡೆಯುವುದಕ್ಕೆ ಜನರೇ ಹೊರಬರದಿದ್ದರೆ ಆಹಾರ ತಯಾರಿಸಿದ್ದು ನಷ್ಟವಾಗುತ್ತದೆ ಎಂಬುದು ಹೋಟೆಲ್‌ ಮಾಲೀಕರ ಆತಂಕ.

ಒಕ್ಕೂಟವು ಎಂದಿನಂತೆ ಪ್ರತಿನಿತ್ಯ 1.91 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದ್ದು, ಅದರಲ್ಲಿ 1.3 ಲಕ್ಷ ಲೀಟರ್‌ ಹಾಲು ಮಾರಾಟ ಆಗುತ್ತದೆ. ಇನ್ನುಳಿದ ಹಾಲಿನಿಂದ ತುಪ್ಪ, ಮೊಸಲು, ಹಾಲಿನ ಪೌಡರ್‌ ಹಾಗೂ ಇತರೆ ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ADVERTISEMENT

‘ರಾಯಚೂರು ಜಿಲ್ಲೆಯಿಂದ ಹಾಲು ಒಕ್ಕೂಟವು 27 ಸಾವಿರ ಲೀಟರ್‌ ಪ್ರತಿನಿತ್ಯ ಸಂಗ್ರಹ ಮಾಡಿಕೊಳ್ಳುತ್ತದೆ. ಸಿಂಧನೂರು ಮತ್ತು ಮಸ್ಕಿ ತಾಲ್ಲೂಕುಗಳಿಂದಲೇ ಅತಿಹೆಚ್ಚು 22 ಸಾವಿರ ಲೀಟರ್‌ ಹಾಲು ಸಂಗ್ರಹವಾಗುತ್ತದೆ. ದೇವದುರ್ಗದಲ್ಲಿ ಹಾಲಿನ ಸೊಸೈಟಿಗಳೇ ಇಲ್ಲ. ರಾಯಚೂರು ತಾಲ್ಲೂಕಿನಲ್ಲಿ ಎರಡೇ ಹಾಲಿನ ಸೊಸೈಟಿಗಳಿದ್ದು, ಗರಿಷ್ಠ 200 ಲೀಟರ್‌ ಹಾಲು ಸಂಗ್ರಹವಾಗುತ್ತದೆ’ ಎಂದು ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ಉಪವ್ಯವಸ್ಥಾಪಕ (ಹಾಲುಸಂಗ್ರಹ ವಿಭಾಗ) ರಾಯಚೂರು ಜಿಲ್ಲಾ ಪ್ರತಿನಿಧಿ ಹನುಮಂತರೆಡ್ಡಿ ಹೇಳಿದರು.

ರಾಯಚೂರು ಜಿಲ್ಲೆಯಲ್ಲಿ ಲಾಕ್‌ಡೌನ್‌ ಪೂರ್ವ ನಿತ್ಯವೂ 43 ಸಾವಿರ ಲೀಟರ್‌ ಮಾರಾಟ ಆಗುತ್ತಿದ್ದ ಹಾಲು, ಇದೀಗ 40 ಸಾವಿರಕ್ಕೆ ಕುಸಿತವಾಗಿದೆ. ನಾಲ್ಕು ನಂದಿನಿ ಪಾರ್ಲರಗಳು ಮತ್ತು ಮೂರು ನಂದಿನಿ ಎನಿ ಟೈಮ್‌ ಮಿಲ್ಕ್‌ ಘಟಕಗಳು ಬೆಳಿಗ್ಗೆ 10 ಗಂಟೆವರೆಗೂ ಮಾತ್ರ ತೆಗೆದಿರುತ್ತವೆ. ಹಾಲು ಮಾರಾಟ ಕುಸಿತವಾದರೆ, ಉಳಿಯುವ ಹಾಲನ್ನು ಬೇರೆ ಉತ್ಪನ್ನಗಳಿಗೆ ಪರಿವರ್ತಿಸುವ ಅನಿವಾರ್ಯತೆ ಎದುರಾಗುತ್ತದೆ.
ಮೂರು ಜಿಲ್ಲೆಗಳ ಪೈಕಿ ಬಳ್ಳಾರಿ ಜಿಲ್ಲೆಯಲ್ಲೆ ಅತಿಹೆಚ್ಚು 1.04 ಲಕ್ಷ ಲೀಟರ್‌ ಹಾಲಿನ ಸಂಗ್ರಹ, ಹಾಗೂ 70 ರಿಂದ 80 ಸಾವಿರ ಲೀಟರ್‌ ಹಾಲಿನ ಬಳಕೆದಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.